ಭೋಪಾಲ್: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಪ್ರಸಿದ್ಧ ಮಹಾಕಾಲ ಶಿವನ ದೇವಾಲಯದಲ್ಲಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿದರು.
ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶದ ಪವಿತ್ರ ನಗರವನ್ನು ಪ್ರವೇಶಿಸಿದೆ. ಈ ಸಂದರ್ಭದಲ್ಲಿ ಉಜ್ಜಯಿನಿಯ ಶಿವನ ದೇವಸ್ಥಾನಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದರು. ಬಳಿಕ ಅರ್ಚಕರ ಮಾರ್ಗದರ್ಶನದಲ್ಲಿ ಮಹಾಕಾಲನಿಗೆ ವಿಶೇಷ ಪೂಜೆ ಸಲ್ಲಿಸಿ, ಜೈನ ಧರ್ಮಗುರು ಪ್ರಜ್ಞಾ ಸಾಗರ್ ಮಹಾರಾಜರ ಆಶೀರ್ವಾದ ಪಡೆದರು.
ವಿಶೇಷ ಪೂಜೆ ಮುಗಿದ ನಂತರ ರಾಹುಲ್ ಗಾಂಧಿ ದೇವಾಲಯದ ಗರ್ಭಗುಡಿಯ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಬಳಿಕ ದೇವಾಲಯದ ಆವರಣದಲ್ಲಿರುವ ನಂದಿ ವಿಗ್ರಹದ ಪಕ್ಕದಲ್ಲಿ ಸ್ವಲ್ಪ ಕಾಲ ಕುಳಿತುಕೊಂಡರು. ಬಳಿಕ ಭಾರತ್ ಜೋಡೋ ಯಾತ್ರೆ ಮುಂದುವರಿಸಿದರು. ಪಕ್ಷದ ನಾಯಕರಾದ ಕಮಲ್‌ನಾಥ್, ಜೈವರ್ಧನ್ ಸಿಂಗ್ ಹಾಗೂ ಜಿತು ಪಟ್ವಾರಿ ಜೊತೆಗಿದ್ದರು.
ಶುಕ್ರವಾರ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಬ್ರಹ್ಮಪುರಿ ಘಾಟ್‍ನಲ್ಲಿರುವ ನರ್ಮದಾ ನದಿಗೆ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಆರತಿ ಬೆಳಗಿ ಬಳಿಕ ಬೆಟ್ಟದ ಮೇಲಿರುವ ಪ್ರಸಿದ್ಧ ಓಂಕಾರೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು.
'ನಿಜವಾದ ತಪಸ್ವಿಗಳು ಯಾರು?': ಬಳಿಕ ಮಧ್ಯಮಗಳೊಂದಿಗೆ ಮಾತನಾಡುತ್ತಾ, ಭಾರತ ತಪಸ್ವಿಗಳನ್ನು ಪೂಜಿಸುವ ದೇಶ. ಇಲ್ಲಿ ನಿಜವಾದ ತಪಸ್ವಿಗಳೆಂದರೆ ರೈತರು ಮತ್ತು ಕಾರ್ಮಿಕರು. ಆದರೆ ಅಂತಹವರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ ಎಂದು ದೂರಿದರು.
ರೈತರಿಗೆ ಸರಿಯಾದ ಸಮಯಕ್ಕೆ ರಸಗೊಬ್ಬರ ಸಿಗುತ್ತಿಲ್ಲ. ಅಲ್ಲದೇ ಅವರು ತಮ್ಮ ಉತ್ಪನ್ನಗಳಿಗೆ ಅರ್ಹವಾದ ಬೆಲೆ ಪಡೆಯುತ್ತಿಲ್ಲ. ಪ್ರೀಮಿಯಂ ಪಾವತಿಸಿದ್ದರೂ ಬೆಳೆ ಹಾನಿಗೆ ವಿಮಾ ಕಂಪನಿಗಳು ಸರಿಯಾದ ಪರಿಹಾರವನ್ನು ನೀಡುತ್ತಿಲ್ಲ. "ಬಿಜೆಪಿಯವರು ಕೈ ಮುಗಿದು ದೇವರನ್ನು ಪೂಜಿಸುತ್ತಾರೆ. ಆದರೆ ನಿಜವಾದ ತಪಸ್ವಿಗಳಾದ ರೈತರು, ಕಾರ್ಮಿಕರು, ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳು ಮತ್ತು ವಿದ್ಯಾವಂತ ಯುವಕರ ಭವಿಷ್ಯವನ್ನು ಹಾಳುಮಾಡುತ್ತಾರೆ" ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: 77ನೇ ದಿನ..: ಹಿಂದಿ ಹೃದಯ ಭಾಗ ಮಧ್ಯಪ್ರದೇಶಕ್ಕೆ ಭಾರತ್ ಜೋಡೋ ಯಾತ್ರೆ ಪ್ರವೇಶ