ಕೇದಾರನಾಥ (ಉತ್ತರಾಖಂಡ): ಉತ್ತರಾಖಂಡಕ್ಕೆ ಮೂರು ದಿನಗಳ ಅಧ್ಯಾತ್ಮಿಕ ಪ್ರವಾಸ ಕೈಗೊಂಡಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸೋಮವಾರ ಆದಿ ಶಂಕರಾಚಾರ್ಯ ಗದ್ದುಗೆಗೆ ಪೂಜೆ ಸಲ್ಲಿಸಿದರು.
ಪಂಚರಾಜ್ಯಗಳ ಚುನಾವಣೆಯ ಬಿಡುವಿರದ ಕೆಲಸಗಳ ಮಧ್ಯೆಯೇ ಉತ್ತರಾಖಂಡಕ್ಕೆ ಮೂರು ದಿನಗಳ ಕಾಲ ಆಧ್ಯಾತ್ಮಿಕ ಪ್ರವಾಸ ಕೈಗೊಂಡಿರುವ ರಾಹುಲ್ ಗಾಂಧಿ ಭಾನುವಾರ ಮಧ್ಯಾಹ್ನ ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಮೊದಲ ದಿನ ಸಂಜೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಅಲ್ಲಿನ ಅರ್ಚಕರು ಹಾಗೂ ಯಾತ್ರಾರ್ಥಿಗಳ ಜೊತೆಗೆ ಸಂವಾದ ನಡೆಸಿದರು. ನಂತರ ಕೇದಾರನಾಥಕ್ಕೆ ಬರುವ ಯಾತ್ರಾರ್ಥಿಗಳಿಗೆ ಚಹಾ ವಿತರಿಸಿ ಗಮನ ಸೆಳೆದರು.
ಪ್ರವಾಸದ ಎರಡನೇ ದಿನವಾದ ಸೋಮವಾರ ಕೇದಾರಪುರಿಯಲ್ಲಿರುವ ಭೈರವನಾಥ ಹಾಗೂ ಶಂಕರಾಚಾರ್ಯ ದೇವಸ್ಥಾನದ ದರ್ಶನ ಮಾಡಿದರು. ನಂತರ ಆದಿ ಶಂಕರಾಚಾರ್ಯರ ಗದ್ದುಗೆಗೆ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಕೇದಾರನಾಥದ ಲಂಗರ್ನಲ್ಲಿ ಅನ್ನಸಂತರ್ಪಣೆಯಲ್ಲಿ ಭಾಗವಹಿಸಿದರು. ಭಕ್ತರಿಗೆ ಅನ್ನ ಬಡಿಸುವ ಮೂಲಕ ರಾಹುಲ್ ಗಾಂಧಿ ಭಕ್ತಿಯ ಸೇವೆಯಲ್ಲಿ ಪಾಲ್ಗೊಂಡರು. ಇದೇ ವೇಳೆ, ಅಲ್ಲಿಗೆ ಆಗಮಿಸಿದ್ದ ಯಾತ್ರಾರ್ಥಿಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಕಂಡು ಬಂತು. ಮೂರು ದಿನಗಳ ಉತ್ತರಾಖಂಡ ಪ್ರವಾಸದ ನಂತರ ನವೆಂಬರ್ 7 ರಂದು ರಾಹುಲ್ ಗಾಂಧಿ ಅವರು ದೆಹಲಿಗೆ ವಾಪಸ್ ಆಗಲಿದ್ದಾರೆ.
ರಾಹುಲ್ ಗಾಂಧಿ ಅವರು ಮೂರು ದಿನಗಳ ಕಾಲ ಕೇದಾರನಾಥದಲ್ಲಿ ವಾಸ್ತವ್ಯ ಹೂಡುತ್ತಿರುವುದು ಇದೇ ಮೊದಲು. ಈ ವರ್ಷದ ಆರಂಭದಲ್ಲಿ ಸಿಕ್ಕಿಂಗೆ ಪ್ರವಾಸ ಕೈಗೊಂಡಿದ್ದ ವೇಳೆ ಅವರು ಅಮೃತಸರದ ಗೋಲ್ಡನ್ ಟೆಂಪಲ್ನಲ್ಲಿ ವಾಸ್ತವ್ಯ ಹೂಡಿದ್ದರು. ಅಲ್ಲದೇ ಗುರುದ್ವಾರದಲ್ಲಿ ಸೇವೆಗಳನ್ನು ಸಲ್ಲಿಸಿ, ಆ ಸಮಯದಲ್ಲಿ ದೇವಸ್ಥಾನದ ಆವರಣ ಹಾಗೂ ಪಾದರಕ್ಷೆಗಳನ್ನೂ ಸ್ವಚ್ಛಗೊಳಿಸಿದ್ದರು. 2015ರಲ್ಲಿ ಕೇದಾರನಾಥ ದೇವಸ್ಥಾನಕ್ಕೆ ಪಾದಯಾತ್ರೆ ಮಾಡಿದ್ದ ರಾಹುಲ್ ಗಾಂಧಿ ಅವರು 2013ರ ಕೇದಾರನಾಥ ಪ್ರವಾದಲ್ಲಿ ಸಾವನ್ನಪ್ಪಿದ್ದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದರು.
ಇದು ರಾಹುಲ್ ಗಾಂಧಿ ಅವರ ವೈಯಕ್ತಿಕ ಪ್ರವಾಸವಾಗಿದ್ದು, ವಿಮಾನದ ಮೂಲಕ ಕೇದಾರನಾಥಕ್ಕೆ ಬಂದಿಳಿದಿದ್ದಾರೆ. ಆಧ್ಯಾತ್ಮಿಕ ಹಾಗೂ ಧಾರ್ಮಿಕ ಉದ್ದೇಶದಿಂದ ರಾಹುಲ್ ಗಾಂಧಿ ಅವರು ಕೇದಾರನಾಥ ಪ್ರವಾಸ ಕೈಗೊಂಡಿದ್ದು, ಕೇದಾರನಾಥದಲ್ಲಿರುವ ಗರ್ವಾಲ್ ಮಂಡಲ್ ವಿಕಾಸ್ ನಿಗಮದ ಅತಿಥಿ ಗೃಹದಲ್ಲಿ ರಾಹುಲ್ ತಂಗಿದ್ದಾರೆ. ಈ ವೇಳೆ, ತಮ್ಮ ಪಕ್ಷದ ಯಾವುದೇ ಪದಾಧಿಕಾರಿಗಳನ್ನು ಅಥವಾ ಆ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗುವುದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಅದಾನಿಯವರಂತಹ ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ ಸಿಎಂ ಬಘೇಲ್.. ಮಾತಿನ ಭರದಲ್ಲಿ ರಾಹುಲ್ ಗಾಂಧಿ ಎಡವಟ್ಟು, ವಿಡಿಯೋ ವೈರಲ್