ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಲಂಡನ್‌ಗೆ ತೆರಳಲಿದ್ದು, ಅಲ್ಲಿ ಅವರು 'ಐಡಿಯಾಸ್ ಫಾರ್ ಇಂಡಿಯಾ' ಸಮ್ಮೇಳನದಲ್ಲಿ ಮಾತನಾಡಲಿದ್ದಾರೆ. ಅಲ್ಲದೇ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ "ಇಂಡಿಯಾ ಎಟ್ 75: ದಿ ಚಾಲೆಂಜಸ್ ಆ್ಯಡ್ ವೇ ಎಹೆಡ್ ಫಾರ್ ರಿಸೈಲೆಂಟ್-ಮಾರ್ಡನ್ ಇಂಡಿಯಾ" ಎಂಬ ವಿಷಯದ ಬಗ್ಗೆ ಸಂವಾದ ನಡೆಸಲಿದ್ದಾರೆ.
ದೇಶದ ಈಗಿನ ಪರಿಸ್ಥಿತಿ ಮತ್ತು ಭವಿಷ್ಯ ಏನು ಎಂಬುದರ ಕುರಿತು ಅವರು ಭಾರತೀಯ ಡಯಾಸ್ಪೊರಾದೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಮತ್ತು ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ತಿಳಿಸಿದ್ದಾರೆ. ಮೇ. 23 ರಂದು ರಾಹುಲ್ ಗಾಂಧಿ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಸಂವಾದ ನಡೆಸಲಿದ್ದಾರೆ.
ಇದನ್ನೂ ಓದಿ: 75 ವರ್ಷಗಳ ಬಳಿಕ ಭಾರತದಲ್ಲಿರುವ ಕುಟುಂಬ ಸೇರಿಕೊಂಡ ಪಾಕ್ ಮಹಿಳೆ
ಶುಕ್ರವಾರ ಲಂಡನ್‌ನಲ್ಲಿ 'ಐಡಿಯಾಸ್ ಫಾರ್ ಇಂಡಿಯಾ' ಕಾರ್ಯಕ್ರಮ ಆಯೋಜಿಸಲಾಗಿದೆ. ಗುರುವಾರ ಸಂಜೆ ಲಂಡನ್ ತಲುಪಲಿದ್ದಾರೆ. ಸಮಾರಂಭದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ನಾಯಕರಾದ ಸಲ್ಮಾನ್ ಖುರ್ಷಿದ್ ಮತ್ತು ಪ್ರಿಯಾಂಕ್ ಖಡ್ಗೆ ಲಂಡನ್‌ನಲ್ಲಿದ್ದಾರೆ.
ಇತ್ತೀಚೆಗಷ್ಟೇ ಕಾಂಗ್ರೆಸ್ ರಾಜಸ್ಥಾನದಲ್ಲಿ ಚಿಂತನ ಶಿಬಿರ ನಡೆಸಿ, 2024ಕ್ಕೆ ಪಕ್ಷವನ್ನು ಅಧಿಕಾರಕ್ಕೆ ತರಲು ರೋಡ್ ಮ್ಯಾಪ್ ತಯಾರು ಮಾಡಿದ್ದು, ಪಕ್ಷ ಬಲವರ್ದನೆಗೆ ಅಕ್ಟೋಬರ್ 2ರಿಂದ ಭಾರತ ಜೋಡೋ ಯಾತ್ರೆ ಕೈಗೊಳ್ಳಲು ತೀರ್ಮಾನಿಸಿದೆ. ಈ ಮಧ್ಯೆ ಗುಜರಾತ್ ಕಾಂಗ್ರೆಸ್ನಲ್ಲಿ ಬಿರುಗಾಳಿ ಎದ್ದಿದೆ. ಹಾರ್ಧಿಕ್ ಪಟೇಲ್ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದು, ಬಿಜೆಪಿಯನ್ನ ಹೋಗಳಿದ್ದಾರೆ.
ಇನ್ನೊಂದೆಡೆ ಪಂಜಾಬ್ ಕಾಂಗ್ರೆಸ್ ಘಟಕದ ಮಾಜಿ ಮುಖ್ಯಸ್ಥ ಸುನೀಲ್ ಜಾಖರ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ಇವೆಲ್ಲ ಬೆಳವಣಿಗೆಗಳ ನಡುವೆ ರಾಹುಲ್ ಗಾಂಧಿ ಲಂಡನ್‌ಗೆ ಭೇಟಿ ನೀಡಲಿದ್ದಾರೆ.