ನವದೆಹಲಿ: ನ್ಯಾಯವ್ಯಾಪ್ತಿಯ ಸಮಸ್ಯೆ ಉದ್ಭವಿಸಿದ ನಂತರ ಜನವರಿ 26ರ ಹಿಂಸಾಚಾರ ಆರೋಪಿ ಪಂಜಾಬಿ ನಟ - ಕಾರ್ಯಕರ್ತ ದೀಪ್ ಸಿಧು ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ದೆಹಲಿ ನ್ಯಾಯಾಲಯ ಮುಂದೂಡಿದೆ.
ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕೆಂಪು ಕೋಟೆ ಬಳಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ ಹೊತ್ತಿರುವ ಸಿಧು ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದರು.
"ಜನವರಿ 26 ರಂದು ಕೆಲವರು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿದರು. ಅವರಲ್ಲಿ ಕೆಲವರನ್ನು ಗುರುತಿಸಲಾಗಿದೆ, ಅದರಲ್ಲಿ ದೀಪ್ ಸಿಧು ಪ್ರಧಾನ ಆರೋಪಿ" ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಡ್ರಗ್ ಪ್ರಕರಣ: 8 ಗಂಟೆಗಳ ವಿಚಾರಣೆ ಬಳಿಕ ಅಜಾಜ್ ಖಾನ್ ವಶಕ್ಕೆ ಪಡೆದ ಎನ್ಸಿಬಿ
ಹೊಸದಾಗಿ ಜಾರಿಗೆ ಬಂದ ಮೂರು ಕೃಷಿ ಕಾನೂನುಗಳ ವಿರುದ್ಧ ನವೆಂಬರ್ 26 ರಿಂದ ರೈತರು ರಾಷ್ಟ್ರ ರಾಜಧಾನಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಗಣರಾಜ್ಯೋತ್ಸವದಂದು, ಪ್ರತಿಭಟನಾಕಾರರು ಮೊದಲೇ ಸಿದ್ಧಪಡಿಸಿದ ಮಾರ್ಗವನ್ನು ಅನುಸರಿಸಲಿಲ್ಲ ಮತ್ತು ದೆಹಲಿಗೆ ಪ್ರವೇಶಿಸಲು ಬ್ಯಾರಿಕೇಡ್‌ಗಳನ್ನು ಮುರಿದು, ಪೊಲೀಸರೊಂದಿಗೆ ಘರ್ಷಣೆ ನಡೆಸಿ, ರೈತರ ಟ್ರ್ಯಾಕ್ಟರ್ ಪರೇಡ್ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಹಲವಾರು ಭಾಗಗಳಲ್ಲಿ ಆಸ್ತಿಯನ್ನು ಧ್ವಂಸಗೊಳಿಸಿದರು. ಬಳಿಕ ಕೆಂಪು ಕೋಟೆಯನ್ನು ಪ್ರವೇಶಿಸಿ, ಅದರ ಮೇಲೆ ಧ್ವಜ ಹಾರಿಸಿದರು.