ಅಹಮದಾಬಾದ್: ಮೋದಿ ಉಪನಾಮ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಗುಜರಾತ್ನ ಹೈಕೋರ್ಟ್‌ನಲ್ಲಿ ಮಾಜಿ ಸಚಿವ ಪೂರ್ಣೇಶ್ ಮೋದಿ ಹೂಡಿದ್ದ ಮಾನನಷ್ಟ ಮೊಕದ್ದಮೆ ಅರ್ಜಿಯನ್ನು ಹಿಂಪಡೆದುಕೊಂಡಿದ್ದಾರೆ. ಹೈಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಕೆಲವು ಪ್ರಕರಣಗಳಿಂದಾಗಿ ವಿಚಾರಣೆ ವಿಳಂಬವಾದ ಕಾರಣ ಅರ್ಜಿಯನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
2019 ರ ಏಪ್ರಿಲ್ 13ರಂದು ಕರ್ನಾಟಕದ ಕೋಲಾರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತಿನ ಪ್ರಹಾರ ನಡೆಸಿದ್ದರು. ಈ ವೇಳೆ, ದೇಶದಲ್ಲಿ ಎಲ್ಲಾ ಕಳ್ಳರೂ ಮೋದಿ ಎಂಬ ಉಪನಾಮ ಹೊಂದಿದ್ದಾರೆ ಎಂದು ಅಪಹಾಸ್ಯ ಮಾಡಿದ್ದರು. ಭಾರತದ ಸಾರ್ವಜನಿಕ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿ ವಿದೇಶಕ್ಕೆ ಪರಾರಿಯಾದ ನೀರವ್ ಮೋದಿ, ಲಲಿತ್ ಮೋದಿ ಹೆಸರನ್ನು ಉಲ್ಲೇಖಿಸಿ ರಾಹುಲ್ ಹೇಳಿಕೆ ನೀಡಿದ್ದರು.
'ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಇವರೆಲ್ಲರೂ 'ಮೋದಿ'ಎಂಬುದನ್ನು ಸಾಮಾನ್ಯ ಉಪನಾಮವಾಗಿ ಹೊಂದಿದ್ದಾರೆ. ಈ ರೀತಿಯ ಸರ್ನೇಮ್ ಹೊಂದಿರುವವರೆಲ್ಲರೂ ಕಳ್ಳರು' ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಹೀಗಾಗಿ, ಅಂದು ಸಚಿವರಾಗಿದ್ದ ಪೂರ್ಣೇಶ್ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ರಾಹುಲ್ ಅವರು ಇಡೀ ಮೋದಿ ಸಮುದಾಯವನ್ನು ದೂಷಿಸಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದರು. ಸೂರತ್ ನ್ಯಾಯಾಲಯದಲ್ಲಿ ಐಪಿಸಿ ಸೆಕ್ಷನ್ 499 ಮತ್ತು 500 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ, ಈ ದೂರನ್ನು ಒಪ್ಪಿಕೊಂಡಿದ್ದ ಮ್ಯಾಜಿಸ್ಟ್ರೇಟ್ ಬಿ.ಹೆಚ್. ಕಪಾಡಿಯಾ ಕಳೆದ ಮೇ ತಿಂಗಳಲ್ಲೇ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ಜಾರಿ ಮಾಡಿದ್ದರು.
ಇದನ್ನೂ ಓದಿ: LACಗೆ ಸೇನೆ ಕಳುಹಿಸಿದ್ದು ರಾಹುಲ್ ಗಾಂಧಿ ಅಲ್ಲ, ಮೋದಿ: ಸಚಿವ ಎಸ್.ಜೈಶಂಕರ್
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರ್ಣೇಶ್ ಮೋದಿ ಅವರು ರಾಹುಲ್ ಗಾಂಧಿ ಹೇಳಿಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದರೊಂದಿಗೆ ಸಿಡಿಯನ್ನು ಪುರಾವೆಯಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದರು. ಆದರೆ, ಸೂರತ್ ಜಿಲ್ಲಾ ನ್ಯಾಯಾಲಯ ಈ ಬೇಡಿಕೆಯನ್ನು ನಿರಾಕರಿಸಿತ್ತು. ಇದಾದ ಬಳಿಕ ಪೂರ್ಣೇಶ್ ಮೋದಿ ನೇರವಾಗಿ ಗುಜರಾತ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಗುಜರಾತ್ ಹೈಕೋರ್ಟ್ ಕೂಡ ಅರ್ಜಿಯನ್ನು ಸ್ವೀಕರಿಸಿತ್ತು. ಇದೀಗ ಅರ್ಜಿ ವಿಚಾರಣೆ ವಿಳಂಬವಾಗುತ್ತಿದೆ ಎಂಬ ಕಾರಣ ನೀಡಿ ಮಾನನಷ್ಟ ಮೊಕದ್ದಮೆ ಅರ್ಜಿಯನ್ನು ಹಿಂಪಡೆದುಕೊಂಡಿದ್ದಾರೆ.
ಇದನ್ನೂ ಓದಿ: 'ಮೋದಿ' ಉಪನಾಮ ಕುರಿತ ವಿವಾದಿತ ಹೇಳಿಕೆ: ಮಾನಹಾನಿ ಪ್ರಕರಣದಲ್ಲಿ ಕೋರ್ಟ್‌ಗೆ ಹಾಜರಾದ ರಾಹುಲ್