ನವದೆಹಲಿ: ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಗೆ ವೀಸಾ ಪಡೆಯಲೆಂದು ತೆರಳಿದಾಗ ಅಲ್ಲಿನ ಅಧಿಕಾರಿಯೊಬ್ಬರು ಲೈಂಗಿಕ ಕಿರುಕುಳ ನೀಡಿರುವುದಾಗಿ ಪಂಜಾಬ್ ಮೂಲದ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ. ಪ್ರಾಧ್ಯಾಪಕಿಯಾಗಿರುವ ಮಹಿಳೆಯು, ಪಾಕಿಸ್ತಾನದ ಲಾಹೋರ್ಗೆ ತೆರಳುವವರಿದ್ದರು. ಅಲ್ಲಿನ ಸ್ಮಾರಕಗಳ ಛಾಯಾಚಿತ್ರ ಸಂಗ್ರಹ ಮತ್ತು ಅಲ್ಲಿನ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ಅವರನ್ನು ಆಹ್ವಾನಿಸಲಾಗಿತ್ತು. ಈ ಸಲುವಾಗಿ ವೀಸಾ ಪಡೆಯಲು ರಾಯಭಾರಿ ಕಚೇರಿಗೆ ಭೇಟಿ ನೀಡಿದ್ದರಂತೆ. ಈ ಸಂದರ್ಭದಲ್ಲಿ ಪಾಕ್ ಅಧಿಕಾರಿ ಲೈಂಗಿಕ ದೌರ್ಜನ್ಯ ನೀಡಿದ್ದಾರೆ ಎಂದು ಹೇಳಿದ್ದಾರೆ ಮಹಿಳೆ ಆರೋಪಿಸಿದ್ದಾರೆ.
'ಕೈ ಹಿಡಿದುಕೊಂಡು ಲೈಂಗಿಕೆ ಕ್ರಿಯೆಗೆ ಒತ್ತಾಯಿಸಿದ್ರು': "ನಾನು 2021ರ ಮಾರ್ಚ್ ಮತ್ತು ಕಳೆದ ವರ್ಷ ಜೂನ್ ತಿಂಗಳಲ್ಲಿ ಎರಡು ಬಾರಿ ರಾಯಭಾರಿ ಕಚೇರಿಗೆ ಭೇಟಿ ನೀಡಿದ್ದೆ. ಆ ಸಮಯದಲ್ಲಿ ಪಾಕಿಸ್ತಾನವು ರಾಜಕೀಯ ಪ್ರಕುಬ್ಧತೆ ಎದುರಿಸುತ್ತಿದ್ದು ವೀಸಾ ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ, ಈ ಸಂದರ್ಭದಲ್ಲಿ ಅಲ್ಲಿದ್ದ ಪಾಕ್ ಅಧಿಕಾರಿಯೊಬ್ಬರು ವೀಸಾ ನೀಡುವುದಾಗಿ ಹೇಳಿದರು. ಅಷ್ಟೇ ಅಲ್ಲ, ನಾನು ಅಲ್ಲಿಂದ ಹೊರಹೋಗುವ ಸಿದ್ಧತೆಯಲ್ಲಿದ್ದಾಗ ನನ್ನನ್ನು ವಾಪಸ್ ಕರೆದುಕೊಂಡು ಹೋದರು. ಬಳಿಕ ವೀಸಾ ಅರ್ಜಿಯ ಬಗ್ಗೆ ಸಾಕಷ್ಟು ಪ್ರಶ್ನೆ ಕೇಳಲು ಪ್ರಾರಂಭಿಸಿದರು. ನನ್ನ ಕೈ ಹಿಡಿದು ನೀವು ಮದುವೆಯಾಗಿದ್ದೀರಾ? ಎಂದು ಪ್ರಶ್ನಿಸಿದ್ದಲ್ಲದೇ ಲೈಂಗಿಕ ಕ್ರಿಯೆಗೂ ಒತ್ತಾಯಿಸಿದರು" ಎಂದು ಸಂತ್ರಸ್ತೆ ಮಾಧ್ಯಮಕ್ಕೆ ಘಟನೆಯನ್ನು ವಿವರಿಸಿದ್ದಾರೆ.
ಇದನ್ನೂ ಓದಿ: ನಿಗೂಢ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು; ಮದುವೆಯಾಗು ಎಂದು ಹೇಳಿದ್ದಕ್ಕೆ ಯುವತಿಯ ಹತ್ಯೆ!
ಘಟನೆಗೆ ಪಾಕಿಸ್ತಾನ ಪ್ರತಿಕ್ರಿಯೆ: ಪಾಕಿಸ್ತಾನ ಅಧಿಕಾರಿಯ ಅಸಭ್ಯ ವರ್ತನೆಯ ಬಗ್ಗೆ ಭಾರತೀಯ ಮಹಿಳೆಯ ಆರೋಪಗಳನ್ನು ಪರಿಶೀಲಿಸುವುದಾಗಿ ಪಾಕಿಸ್ತಾನದ ವಿದೇಶಾಂಗ ಕಚೇರಿ ಗುರುವಾರ ತಿಳಿಸಿದೆ. ರಾಯಭಾರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪಾಕಿಸ್ತಾನ ಅಧಿಕಾರಿಗಳಿಗೆ ವೃತ್ತಿಪರವಾಗಿ ವರ್ತಿಸುವಂತೆಯೂ ಕಟ್ಟುನಿಟ್ಟಾಗಿ ಸೂಚಿಸಿದೆ. ಆದರೆ, ಈವರೆಗೂ ಯಾವುದೇ ಕಠಿಣ ಕ್ರಮಕ್ಕೆ ಪಾಕಿಸ್ತಾನ ಮುಂದಾಗಿಲ್ಲ. ಪ್ರಕರಣ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಅಸ್ಸಾಂ ಮಹಿಳೆ ಪಾಕಿಸ್ತಾನ ಜೈಲಿನಲ್ಲಿ ಪತ್ತೆ: ಅಸ್ಸಾಂ ನಾಗಾಂವ್ ಎಂಬಲ್ಲಿನ ನಿವಾಸಿ ವಹೀದಾ ಬೇಗಂ 2022ರ ನವೆಂಬರ್ 10ರಂದು ಕಾಣೆಯಾಗಿದ್ದರು. ನಾಪತ್ತೆಯಾದ 15 ದಿನಗಳಲ್ಲೇ ಅವರು ಪಾಕಿಸ್ತಾನದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಈ ಬಗ್ಗೆ ಪಾಕಿಸ್ತಾನಿ ವಕೀಲರೊಬ್ಬರು ಮಹಿಳೆಯ ತಾಯಿಗೆ ವಾಟ್ಸಾಪ್ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಸಹಾಯ ಕೋರಿ ವಹೀದಾ ತಾಯಿ ಪೊಲೀಸರ ಬಳಿ ತೆರಳಿದ್ದರು. ಆದರೆ, ಪೊಲೀಸರಿಂದ ಯಾವುದೇ ನೆರವು ಅವರಿಗೆ ಸಿಕ್ಕಿರಲಿಲ್ಲ. ಹೀಗಾಗಿ ವಹೀದಾ ತಾಯಿ ದೆಹಲಿ ಕೋರ್ಟ್ ಮೊರೆ ಹೋಗಿದ್ದರು. ಈ ಬಗ್ಗೆ ಹೈಕೋರ್ಟ್ ವಿಚಾರಣೆ ನಡೆಸಲಿದೆ. ಬಳಿಕವಷ್ಟೇ ಅವರನ್ನು ಭಾರತಕ್ಕೆ ಕರೆಸಿಕೊಳ್ಳುವ ಬಗ್ಗೆ ಹೈಕೋರ್ಟ್ ನಿರ್ಧರಿಸಲಿದೆ ಎಂದು ತಿಳಿದುಬಂದಿದೆ. ಆದರೆ, ಪಾಕಿಸ್ತಾನಕ್ಕೆ ವಹೀದಾ ಬೇಗಂ ಹೋಗಿದ್ದೇಗೆ, ಯಾಕೆ ಹೋಗಿದ್ದರು ಎಂಬುದಿನ್ನೂ ಸ್ಪಷ್ಟವಾಗಿಲ್ಲ.
ಇದನ್ನೂ ಓದಿ: ಚೈಬಾಸಾ ಟೆಂಟೊದಲ್ಲಿ ನಕ್ಷಲರಿಂದ ಐಇಡಿ ಸ್ಫೋಟ: 3 ಸಿಆರ್‌ಪಿಎಫ್ ಯೋಧರಿಗೆ ತೀವ್ರ ಗಾಯ