ಚಂಡೀಗಢ (ಪಂಜಾಬ್): ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ರಾಜೀನಾಮೆಯಿಂದಾಗಿ ತೆರವುಗೊಂಡಿದ್ದ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ದಲಿತ ಮುಖಂಡ ಚರಣಜಿತ್ ಸಿಂಗ್ ಚನ್ನಿ (58) ಆಯ್ಕೆ ಆಗಿದ್ದಾರೆ. ಅವರು ಇಂದು 11 ಗಂಟೆಗೆ ಪಂಜಾಬ್ ರಾಜ್ಯದ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಭಾನುವಾರ ನಡೆದ ಪಂಜಾಬ್ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಚನ್ನಿ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಕಳೆದ ಕೆಲ ತಿಂಗಳಿಂದ ಪಂಜಾಬ್ ಕಾಂಗ್ರೆಸ್ನಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟಿಗೆ ಈ ಮೂಲಕ ತೆರೆ ಬಿದ್ದಿದೆ. ಇದ್ದಕ್ಕಿದ್ದಂತೆ ನಿನ್ನೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪಂಜಾಬ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪಂಜಾಬ್ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಸುನಿಲ್ ಜಖರ್, ಪಕ್ಷದ ಪ್ರಸ್ತುತ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮತ್ತು ಸುಖಜಿಂದರ್ ಸಿಂಗ್ ರಾಂಧವ ಅವರ ಹೆಸರು ನೂತನ ಸಿಎಲ್‌ಪಿ ನಾಯಕನ ರೇಸ್ನಲ್ಲಿ ಮುಂಚೂಣಿಯಲ್ಲಿತ್ತು.
ಇದರ ಬೆನ್ನಲ್ಲೇ ಇಂದು ಸಿಎಲ್‌ಪಿ ಸಭೆ ನಡೆಸಲಾಗಿದ್ದು, ಅಚ್ಚರಿ ಎಂಬಂತೆ ಈ ಚನ್ನಿ ಅವರನ್ನು ಪಂಜಾಬ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿತ್ತು. ಚರಣಜಿತ್ ಸಿಂಗ್ ಚನ್ನಿ ಅವರು ಪಂಜಾಬ್‌ನ ತಾಂತ್ರಿಕ ಶಿಕ್ಷಣ ಮತ್ತು ಕೈಗಾರಿಕಾ ತರಬೇತಿ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಸಿಎಂ ಆಗಿ ರಾಜ್ಯಭಾರ ಮಾಡಲಿದ್ದಾರೆ.
ಇಂದು ನಡೆಯುವ ಪ್ರಮಾಣವಚನ ಸಮಾರಂಭದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾಗಿಯಾಗಲಿದ್ದಾರೆ. ನೂತನ ಸಿಎಂ ಆಗಿ ಆಯ್ಕೆ ಆಗಿರುವ ಚನ್ನಿಗೆ ನಿಕಟಪೂರ್ವ ಸಿಎಂ ಅಮರಿಂದರ್ ಸಿಂಗ್ ಶುಭಕೋರಿದ್ದಾರೆ.
ದಲಿತ ಸಮುದಾಯಕ್ಕೆ ಸೇರಿದ ಚರಣ್ಜಿತ್ ಸಿಂಗ್
ಚರಣ್ಜಿತ್ ಸಿಂಗ್ ಚನ್ನಿ ಪಂಜಾಬ್‌ನ ಮೊದಲ ದಲಿತ ಮುಖ್ಯಮಂತ್ರಿಯಾಗಲಿದ್ದಾರೆ,ಇದು ರಾಜ್ಯದ ಜನಸಂಖ್ಯೆಯ 1/3 ಭಾಗವನ್ನು ಒಳಗೊಂಡಿದೆ.ಅವರು ರಾಮದಾಸಿಯಾ ಸಿಖ್ ಸಮುದಾಯಕ್ಕೆ ಸೇರಿದರಾಗಿದ್ದಾರೆ.
ಚನ್ನಿ (Charanjit Singh Channi) ಚಮಕೌರ್ ಸಾಹಿಬ್ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದಾರೆ ಮತ್ತು ರಾಜ್ಯದ ತಾಂತ್ರಿಕ ಶಿಕ್ಷಣ ಸಚಿವರಾಗಿದ್ದರು.ಅವರು ಪಂಜಾಬ್ ವಿಧಾನಸಭೆಯಲ್ಲಿ 2015 ರಿಂದ 2016 ರವರೆಗೆ ವಿರೋಧ ಪಕ್ಷದ ನಾಯಕರಾಗಿದ್ದರು. ಅವರನ್ನು ಮಾರ್ಚ್ 2017 ರಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡಲಾಗಿತ್ತು.