ಪುಣೆ/ಮಹಾರಾಷ್ಟ್ರ : ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಎನ್‌ಸಿಪಿಯ ಪುಣೆ ನಗರ ಅಧ್ಯಕ್ಷ ಪ್ರಶಾಂತ್ ಜಗ್ತಾಪ್ ಸೇರಿದಂತೆ 100 ರಿಂದ 300 ಕಾರ್ಯಕರ್ತರ ವಿರುದ್ಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಕ್ಷದ ನೂತನ ಕಚೇರಿ ಉದ್ಘಾಟನೆಗಾಗಿ ಎನ್‌ಸಿಪಿ ಕಾರ್ಯಕರ್ತರು ಒಂದು ದಿನ ಮುಂಚಿತವಾಗಿ ಪುಣೆಯಲ್ಲಿ ಜಮಾಯಿಸಿದ್ದಲ್ಲದೇ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಹಿನ್ನೆಲೆ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿನ್ನೆಲೆ ಪುಣೆ ನಗರದ ಅಧ್ಯಕ್ಷ ಪ್ರಶಾಂತ್ ಜಗ್ತಾಪ್, ಎನ್‌ಸಿಪಿ ಯುವ ಅಧ್ಯಕ್ಷ ಮಹೇಶ್ ರಮೇಶ್ ಹಂಡೆ, ರಾಜ್ಯ ಕಾರ್ಯನಿರ್ವಾಹಕ ಸದಸ್ಯ ಪ್ರದೀಪ್ ದೇಶ್ಮುಖ್, ಮಾಜಿ ಕಾರ್ಪೊರೇಟರ್ ನಿಲೇಶ್ ನಿಕಮ್, ಬಾಲಾಸಾಹೇಬ್ ಬೊಡ್ಕೆ, ಪ್ರಧಾನ ಕಾರ್ಯದರ್ಶಿ ರೋಹನ್ ಪೇಗುಡೆ ಮತ್ತು 100 ರಿಂದ 150 ಅಪರಿಚಿತ ಪುರುಷರು ಮತ್ತು ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನ್ಯಾಷನಲ್ ಕಾಂಗ್ರೆಸ್ ಪಾರ್ಟಿಯ ಹೊಸ ಕೇಂದ್ರ ಕಚೇರಿಯ ಉದ್ಘಾಟನೆ ಶನಿವಾರ ಸಂಜೆ ಶಿವಾಜಿನಗರ ಪ್ರದೇಶದಲ್ಲಿ ನಡೆಯಿತು. ಉದ್ಘಾಟನಾ ಕಾರ್ಯಕ್ರಮವು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಪಕ್ಷದ ಇತರ ಮುಖಂಡರ ಸಮ್ಮುಖದಲ್ಲಿ ನಡೆಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವೇಳೆ ಪಕ್ಷದ ನೂರಾರು ಕಾರ್ಯಕರ್ತರು ಆಗಮಿಸಿದ್ದು, ಮಾಸ್ಕ್ ಧರಿಸಿರಲಿಲ್ಲ ಹಾಗೂ ಸಾಮಾಜಿಕ ಅಂತರವನ್ನೂ ಕಾಯ್ದುಕೊಂಡಿರಲಿಲ್ಲ.
ಇದನ್ನೂ ಓದಿ: ಬಿಎಸ್ವೈ ಸಿಎಂ ಆಗಿ ಮುಂದುವರಿಯದಿದ್ರೆ ರಾಜ್ಯದಲ್ಲಿ ಬಿಜೆಪಿ ಇರಲ್ಲ : ಕೆ ಹೆಚ್ ಮುನಿಯಪ್ಪ