ಲಖನೌ(ಉತ್ತರ ಪ್ರದೇಶ): ಅಗ್ನಿಪಥ ಯೋಜನೆ ವಿರೋಧಿಸಿ ಗುರುವಾರ ಮತ್ತು ಶುಕ್ರವಾರ ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ. ಈ ವೇಳೆ ರೊಚ್ಚಿಗೆದ್ದ ಪ್ರತಿಭಟನಾಕಾರರು ಹಲವೆಡೆ ರೈಲಿಗೆ ಬೆಂಕಿ ಹಚ್ಚಿದ್ದಾರೆ. ಖಾಸಗಿ ಹಾಗೂ ಸಾರ್ವಜನಿಕ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಇದೀಗ ಹಿಂಸಾತ್ಮಕವಾಗಿ ಪ್ರತಿಭಟಿಸಿದ ಕಿಡಿಗೇಡಿಗಳ ವಿರುದ್ಧ ಯುಪಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಈವರೆಗೆ 260 ಕಿಡಿಗೇಡಿಗಳನ್ನು ಬಂಧಿಸಲಾಗಿದೆ. ಅಲಿಗಢ ಪೊಲೀಸರು ಉಗ್ರ ಪ್ರತಿಭಟನಾಕಾರರ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದ್ದಾರೆ.
ಸಾರ್ವಜನಿಕ ಆಸ್ತಿಪಾಸ್ತಿ ಹಾನಿ: ಶುಕ್ರವಾರ ಯುಪಿಯ ಬಲಿಯಾದಲ್ಲಿ, ಕೇಂದ್ರದ ಸೇನೆಗೆ ನೇಮಕಾತಿಗಾಗಿ 'ಅಗ್ನಿಪಥ' ಯೋಜನೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಯುವಕರು ಖಾಲಿ ರೈಲಿಗೆ ಬೆಂಕಿ ಹಚ್ಚಿದರು. ಅದೇ ಸಮಯದಲ್ಲಿ, ಅಲಿಘರ್, ವಾರಾಣಸಿ ಮತ್ತು ಫಿರೋಜಾಬಾದ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದವು. ಇದರಿಂದ ಸರ್ಕಾರಿ ಬಸ್‌ಗಳು ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದೆ.
6 ಎಫ್‌ಐಆರ್: ಈವರೆಗೆ ಫಿರೋಜಾಬಾದ್, ಅಲಿಗಢ, ವಾರಾಣಸಿ ಮತ್ತು ನೋಯ್ಡಾದಲ್ಲಿ ಒಟ್ಟು 6 ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಯುಪಿ ಎಡಿಜಿ ಪ್ರಶಾಂತ್ ಕುಮಾರ್ ಹೇಳಿದ್ದಾರೆ. ಇದರಲ್ಲಿ 260 ಕಿಡಿಗೇಡಿಗಳನ್ನು ಬಂಧಿಸಲಾಗಿದೆ. ಬಲಿಯಾದಲ್ಲಿ-109, ಮಥುರಾದಲ್ಲಿ- 70, ಅಲಿಗಢದಲ್ಲಿ-30, ವಾರಾಣಸಿ ಕಮಿಷನರೇಟ್‌ನಲ್ಲಿ 27, ನೋಯ್ಡಾ ಕಮಿಷನರೇಟ್‌ನಲ್ಲಿ 15 ಮತ್ತು ಆಗ್ರಾದಲ್ಲಿ 9 ಆರೋಪಿಗಳನ್ನು ಬಂಧಿಸಲಾಗಿದೆ.
ಪೊಲೀಸ್ ಮತ್ತು ಜಿಆರ್‌ಪಿ ರಜೆ ರದ್ದು: ಸೇನಾ ನೇಮಕಾತಿಯ ಅಗ್ನಿಪಥ ಯೋಜನೆ ವಿರುದ್ಧದ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು, ಯುಪಿ ಪೊಲೀಸರು ತಕ್ಷಣದಿಂದ ಜಾರಿಗೆ ಬರುವಂತೆ ಜೂನ್ 23 ರವರೆಗೆ ಪೊಲೀಸರ ರಜೆಯನ್ನು ರದ್ದುಗೊಳಿಸಿದ್ದಾರೆ. ಪ್ರತಿಭಟನಾಕಾರರು ರೈಲುಗಳನ್ನು ಗುರಿಯಾಗಿಸಿಕೊಂಡಿದ್ದರಿಂದ ಜಿಆರ್‌ಪಿ ಸಿಬ್ಬಂದಿ(ಸರ್ಕಾರಿ ರೈಲ್ವೆ ಪೊಲೀಸ್)ಯ ರಜೆಯನ್ನು ಸಹ ಜೂನ್ 23 ರವರೆಗೆ ರದ್ದುಗೊಳಿಸಲಾಗಿದೆ.
ಇದನ್ನೂ ಓದಿ: ಅಗ್ನಿಪಥ ಯೋಜನೆಗೆ ವಿರೋಧ: ಬಿಹಾರ,ಯುಪಿ,ತೆಲಂಗಾಣದಲ್ಲಿ ಭುಗಿಲೆದ್ದ ಆಕ್ರೋಶ, ರೈಲುಗಳಿಗೆ ಬೆಂಕಿ