ಉನಾ (ಹಿಮಾಚಲ ಪ್ರದೇಶ) : ದೆಹಲಿ, ಪಂಜಾಬ್ನಲ್ಲಿ ಹೆಚ್ಚಾಗಿ ಕಾಣಸಿಗುವ ಖಲಿಸ್ತಾನಿ ಬೆಂಬಲಿಗರ ಚಟುವಟಿಕೆಗಳು ಹಿಮಾಚಲಪ್ರದೇಶದಲ್ಲಿ ಮತ್ತೆ ಕಾಣಿಸಿಕೊಂಡಿವೆ. ಇಲ್ಲಿನ ಉನಾ ಜಿಲ್ಲೆಯ ದೇವಸ್ಥಾನವೊಂದರ ಗೋಡೆಗಳ ಮೇಲೆ ಖಲಿಸ್ತಾನ್ ಪರ ಘೋಷಣೆಗಳನ್ನು ಬರೆಯಲಾಗಿದೆ. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ಆರಂಭಿಸಲಾಗಿದೆ.
ನಿಷೇಧಿತ ಸಿಖ್ ಫಾರ್ ಜಸ್ಟಿಸ್ ಸಂಘಟನೆಯ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನು ಇರುವ ಖಲಿಸ್ತಾನ್ಗೆ ಬೆಂಬಲವಾಗಿ ಬರೆದ ಘೋಷಣೆಗಳ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಆತ ಉನಾದಲ್ಲಿ ಬರೆದಿರುವ ಘೋಷಣೆಗಳನ್ನು ಉಲ್ಲೇಖಿಸಿದ್ದಾನೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153-ಎ ಮತ್ತು 153-ಬಿ ಮತ್ತು ಎಚ್‌ಪಿ ಓಪನ್ ಪ್ಲೇಸಸ್ ಆ್ಯಕ್ಟ್, 1985 ರ ಸೆಕ್ಷನ್ 3 ರ ಅಡಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿಡಿಯೋ ಕ್ಲಿಪ್ ಆಧರಿಸಿ, ಗುರುಪತ್ವಂತ್ನನ್ನು ಪ್ರಕರಣದ ಪ್ರಮುಖ ಸಂಚುಕೋರ ಎಂದು ಗುರುತಿಸಲಾಗಿದೆ.
ಈ ಹಿಂದಿನ ಬರಹಗಳು: ಈ ಹಿಂದೆಯೂ ಖಲಿಸ್ತಾನಿ ಪರ ಘೋಷಣೆಗಳನ್ನು ಬರೆದಿರುವ ಪ್ರಕರಣ ಹಿಮಾಚಲ ಪ್ರದೇಶದಲ್ಲಿ ಬೆಳಕಿಗೆ ಬಂದಿದ್ದವು. ಅಕ್ಟೋಬರ್ 4 ರಂದು, ಏಕದಿನ ಕ್ರಿಕೆಟ್ ವಿಶ್ವಕಪ್ ಪ್ರಾರಂಭವಾಗುವ ಮುನ್ನ ಧರ್ಮಶಾಲಾದ ಸರ್ಕಾರಿ ಕಚೇರಿಯ ಗೋಡೆಯ ಮೇಲೆ ಘೋಷಣೆಗಳನ್ನು ಬರೆಯಲಾಗಿತ್ತು. ಸ್ಪ್ರೇ ಪೇಂಟ್‌ನಿಂದ ಬರೆಯಲಾಗಿದ್ದ ಬರಹದಲ್ಲಿ ಕ್ರಿಕೆಟ್ ಪಂದ್ಯಕ್ಕೆ ಬೆದರಿಕೆ ಹಾಕಲಾಗಿತ್ತು. ಬಳಿಕ ಪೊಲೀಸರು ಇದನ್ನು ಅಳಿಸಿ ಹಾಕಿದ್ದರು.
ಈ ಬರಹಗಳಿಂದಾಗಿ ಪೊಲೀಸರು ಮತ್ತು ಭದ್ರತಾ ಏಜೆನ್ಸಿಗಳು ನಗರದಲ್ಲಿ ತೀವ್ರ ನಿಗಾ ವಹಿಸಿದ್ದರು. ಅಕ್ಟೋಬರ್ 7 ರಂದು ವಿಶ್ವಕಪ್ ಮೊದಲ ಪಂದ್ಯ ಆಯೋಜನೆಯಾಗಿತ್ತು. ಇದಕ್ಕೂ ಎರಡು ದಿನ ಮುಂಚೆ ಬರಹಗಳನ್ನು ಗೀಚಲಾಗಿತ್ತು. ಇದರಿಂದ ಕ್ರೀಡಾಂಗಣಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿತ್ತು.
ಜೊತೆಗೆ ಮೇ 7, 2022 ರಂದು ಧರ್ಮಶಾಲಾದ ತಪೋವನದಲ್ಲಿರುವ ವಿಧಾನಸೌಧದ ಗೋಡೆಗಳ ಮೇಲೆ ಖಲಿಸ್ತಾನ್ ಪರ ಘೋಷಣೆಗಳನ್ನು ಬರೆಯಲಾಗಿತ್ತು. ಶಿಮ್ಲಾವನ್ನು ಖಲಿಸ್ತಾನ್‌ನ ಭಾಗ ಎಂದು ಕರೆಯುವ ಮೂಲಕ ಹಿಮಾಚಲಕ್ಕೆ ಸಂಬಂಧಿಸಿದಂತೆ ಗುರುಪತ್ವಂತ್ ಸಿಂಗ್ ಪನ್ನು ಬೆದರಿಕೆಯ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದ. ಇಲ್ಲಿ ತ್ರಿವರ್ಣ ಧ್ವಜ ಹಾರಿಸಕೂಡದು ಎಂದು ಎಚ್ಚರಿಸಿದ್ದ.
ಖಲಿಸ್ತಾನ್ ಪರ ಘೋಷಣೆಗಳನ್ನು ಬರೆದಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ. ಶೀಘ್ರದಲ್ಲೇ ಕಿಡಿಗೇಡಿಗಳು ಸಿಕ್ಕಿ ಬೀಳಲಿದ್ದಾರೆ. ಸಿಸಿಟಿವಿ ಪರಿಶೀಲಿಸುತ್ತಿದ್ದಾರೆ ಉನಾದ ಉಸ್ಪಿ ಅರ್ಜಿತ್ ಸೇನ್ ಠಾಕೂರ್ ಹೇಳಿದ್ದಾರೆ.
ನಿರಂತರ ಬೆದರಿಕೆ ವಿಡಿಯೋಗಳು: ನಿಷೇಧಿತ ಸಿಖ್ ಫಾರ್ ಜಸ್ಟಿಸ್ ಸಂಘಟನೆಯು ಇಂತಹ ಪ್ರಕರಣಗಳ ಹೊಣೆಗಾರಿಕೆ ಹೊತ್ತಿದೆ. ಸಂಘಟನೆಯು ಹಲವು ವಿಡಿಯೋಗಳು ಮತ್ತು ಆಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಹರಿಬಿಡುತ್ತಿದೆ. ಇವುಗಳಲ್ಲಿ ಉಗ್ರ ಗುರುಪತ್ವಂತ್ ಪನ್ನು ಕಾಣಿಸಿಕೊಂಡು ಬೆದರಿಕೆ ಸಂದೇಶಗಳನ್ನು ನೀಡುತ್ತಿರುತ್ತಾನೆ. ಈಚೆಗೆ ಪಂಜಾಬ್‌ನ ಅಮೃತಸರದ ಏರ್‌ಪೋರ್ಟ್ ರಸ್ತೆಯಲ್ಲಿ ಖಲಿಸ್ತಾನ್ ಪರ ಘೋಷಣೆಗಳನ್ನು ಬರೆಯಲಾಗಿತ್ತು. ಬಳಿಕ ವಿಡಿಯೋದಲ್ಲಿ ಏರ್ ಇಂಡಿಯಾ ವಿಮಾನಗಳನ್ನು ಉಡಾಯಿಸಲಾಗುವುದು ಎಂದು ಬೆದರಿಕೆ ಹಾಕಲಾಗಿತ್ತು. ಈ ಸಂಬಂಧ ಎನ್‌ಐಎ ಪನ್ನು ವಿರುದ್ಧ ಹಲವು ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಸ್ಪೋಟಿಸುವ ಬೆದರಿಕೆ: ಖಲಿಸ್ತಾನ್ ಉಗ್ರರಿಗೆ ಭಾರತ ಖಡಕ್ ಎಚ್ಚರಿಕೆ