ಉನ್ನಾವೋ (ಉತ್ತರಪ್ರದೇಶ) : ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಇಂದು ಸಂಜೆ 6 ಗಂಟೆಗೆ ಉನ್ನಾವೋದ ಜಿಲ್ಲಾಸ್ಪತ್ರೆಗೆ ಆಗಮಿಸಲಿದ್ದಾರೆ. ಅಲ್ಲಿ ಅವರು ಸಂತ್ರಸ್ತ ದಲಿತ ಬಾಲಕಿಯ ಕುಟುಂಬಸ್ಥರನ್ನು ಭೇಟಿಯಾಗಲಿದ್ದಾರೆ.
ಕಳೆದ ಎರಡು ತಿಂಗಳಿಂದ ನಾಪತ್ತೆಯಾಗಿದ್ದ 22 ವರ್ಷದ ಬಾಲಕಿಯ ಶವ, ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡರಾದ ಫತೇಹ್ ಬಹದ್ದೂರ್ ಸಿಂಗ್ ಪುತ್ರನ ಜಮೀನಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಬಾಲಕಿಯ ಶವದ ಮರಣೋತ್ತರ ಪರೀಕ್ಷೆಯ ಮೊದಲ ವರದಿಗೂ, ಎರಡನೇ ವರದಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ಮಂಗಳವಾರ ಸಂಜೆಯಿಂದ ಬಾಲಕಿ ಕುಟುಂಬಸ್ಥರೊಂದಿಗೆ, ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಶವಾಗಾರದ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಪ್ರಿಯಾಂಕಾ ಗಾಂಧಿ ಸಂತ್ರಸ್ತೆಯ ತಾಯಿಯೊಂದಿಗೆ ದೂರವಾಣಿ ಸಂಭಾಷಣೆ ನಡೆಸಿ, ನ್ಯಾಯಕ್ಕಾಗಿ ಹೋರಾಟ ಮಾಡುವ ಭರವಸೆ ನೀಡಿದ್ದರು. ಕಾಂಗ್ರೆಸ್ ನಿಯೋಗ ಉನ್ನಾವೋಗೆ ತೆರಳಿ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿದೆ. ಪ್ರಿಯಾಂಕಾ ಗಾಂಧಿ ಬುಧವಾರ ಸಂಜೆ 6 ಗಂಟೆಗೆ ಕುಟುಂಬ ಸದಸ್ಯರನ್ನು ಭೇಟಿಯಾಗಲಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಅತಿ ದೊಡ್ಡ ಜೈನ ಮಂದಿರ
ಫೆಬ್ರವರಿ 10ರಂದು ಎಸ್ಪಿ ಸರ್ಕಾರದಲ್ಲಿ ಸಚಿವರಾಗಿದ್ದ ದಿ. ಫತೇಹ್ ಬಹದ್ದೂರ್ ಸಿಂಗ್ ಪುತ್ರನ ಆಶ್ರಮದ ಪಕ್ಕದ ಖಾಲಿ ಜಾಗದಲ್ಲಿ ಸುಮಾರು ಎರಡು ತಿಂಗಳಿನಿಂದ ಕಾಣೆಯಾಗಿದ್ದ ದಲಿತ ಬಾಲಕಿಯ ಶವ ಪತ್ತೆಯಾಗಿದೆ. ಬಾಲಕಿಯನ್ನು ಅಪಹರಿಸಿರುವ ಮತ್ತು ಕೊಲೆ ಮಾಡಿರುವ ಆರೋಪ ರಾಜೋಲ್ ಸಿಂಗ್ ಮೇಲೆ ಕೇಳಿ ಬಂದಿದೆ.
ಈ ಹಿಂದೆ ಬಹುಜನ ಸಮಾಜವಾದಿ ಪಕ್ಷದ ಸುಪ್ರೀಂಕೋರ್ಟ್‌ನ ವಕೀಲೆ ಸೀಮಾ ಕುಶ್ವಾಹಾ ಸಂತ್ರಸ್ತೆ ಕುಟುಂಬಸ್ಥರನ್ನು ಭೇಟಿಯಾಗಿ, ಅವರಿಗೆ ಸಾಧ್ಯವಿರುವ ಎಲ್ಲ ನ್ಯಾಯವನ್ನು ಕೊಡಿಸುವ ಭರವಸೆ ನೀಡಿದ್ದರು.