ಸಿರ್ಸಾ (ಹರಿಯಾಣ) : ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಹಿನ್ನೆಲೆ ಇದು ಭಾರತದ ಮೇಲೂ ಪರಿಣಾಮ ಬೀರುತ್ತಿದೆ. ತಾಲಿಬಾನ್ ಆಮದು ಮತ್ತು ರಫ್ತುಗಳನ್ನು ಭಾರತದೊಂದಿಗೆ ನಿಷೇಧಿಸಿದೆ. ಫೆಡರೇಶನ್ ಆಫ್ ಇಂಡಿಯಾ ರಫ್ತು ಸಂಸ್ಥೆಯ ಅಜಯ್ ಸಹಾಯ್ ಕೂಡ ಇತ್ತೀಚಿನ ಈ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ.
ಭಾರತವು ಸಕ್ಕರೆ, ಚಹಾ, ಕಾಫಿ, ಮಸಾಲೆಗಳು ಮತ್ತು ಇತರ ವಸ್ತುಗಳನ್ನು ಅಫ್ಘಾನಿಸ್ತಾನಕ್ಕೆ ರಫ್ತು ಮಾಡುತ್ತಿತ್ತು. ಹಾಗೆಯೇ ಅಲ್ಲಿಂದ ಭಾರತವು ಡ್ರೈ ಫ್ರೂಟ್ಸ್ , ಈರುಳ್ಳಿ ಇತ್ಯಾದಿಗಳನ್ನು ಅಫ್ಘಾನಿಸ್ತಾನದಿಂದ ಆಮದು ಮಾಡಿಕೊಳ್ಳುತ್ತಿತ್ತು. ಆದರೆ, ಈಗ ಭಾರತದಲ್ಲಿ ಡ್ರೈಫ್ರೂಟ್ಸ್ ಬೆಲೆಗಳು ಹೆಚ್ಚಾಗತೊಡಗಿವೆ.
ಇದರ ಎಫೆಕ್ಟ್ ಹೆಚ್ಚಾಗಿ ಹರಿಯಾಣಕ್ಕೆ ತಟ್ಟಿದೆ. ಬಾದಾಮಿ ದರಗಳು ಪ್ರತಿ ಕೆಜಿಗೆ ರೂ.900 ರಿಂದ ₹1000ಗೆ ಏರಿಕೆ ಕಂಡಿದೆ. ಹಾಗೆ ಅಂಜೂರದ ಹಣ್ಣುಗಳು ಮತ್ತು ಪೇಶಾವರದ ಪಿಸ್ತಾಗಳು ಕೂಡ ಗಗನಕ್ಕೇರಿವೆ.
ಡ್ರೈ ಫ್ರೂಟ್ಸ್ ಬೆಲೆಯಲ್ಲಿನ ಏರಿಕೆಯು ಹಬ್ಬ-ಹರಿದಿನಗಳಲ್ಲಿ ಡ್ರೈಫ್ರೂಟ್ಸ್ ವ್ಯಾಪಾರಿಗಳ ಉತ್ಸಾಹ ಕುಗ್ಗಿಸುತ್ತಿದೆ. ಈ ವಿಷಯದ ಕುರಿತು ಈಟಿವಿ ಭಾರತ ತಂಡವು ಸಿರ್ಸಾದ ಕೆಲವು ಡ್ರೈ ಫ್ರೂಟ್ಸ್ ವ್ಯಾಪಾರಿಗಳೊಂದಿಗೆ ಮಾತನಾಡಿದೆ. ಈ ವೇಳೆ ಕಂಡು ಬಂದದ್ದು ಡ್ರೈಫ್ರೂಟ್ಸ್ ವ್ಯಾಪಾರಿಗಳು ತುಂಬಾ ನಿರಾಶೆಗೊಂಡಿದ್ದಾರೆ ಮತ್ತು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬಿಕ್ಕಟ್ಟು ನೇರವಾಗಿ ಇಲ್ಲಿನ ವ್ಯವಹಾರದ ಮೇಲೆ ಪರಿಣಾಮ ಬೀರುತ್ತಿದೆ ಎಂಬುದು.
ಮಾರಾಟಗಾರರೊಬ್ಬರು ಮಾತನಾಡಿ, ಬಾದಾಮಿಯ ದರ ಪ್ರತಿ ಕೆಜಿಗೆ ರೂ. 650 ಇದ್ದದ್ದು, ಈಗ ಪ್ರತಿ ಕೆಜಿಗೆ ರೂ 900 ರಿಂದ 1,000ಕ್ಕೆ ಏರಿಕೆಯಾಗಿದೆ. ಬಾದಾಮಿಯ ಜೊತೆಗೆ ಇತರೆ ಅಂಜೂರದ ಹಣ್ಣುಗಳು, ಪಿಸ್ತಾ, ಏಪ್ರಿಕಾಟ್, ವಾಲ್ನಟ್ಸ್ ಇತ್ಯಾದಿಗಳ ಬೆಲೆಯೂ ಹೆಚ್ಚಾಗಿದೆ ಎಂದು ಅವರು ಹೇಳಿದರು.
ಡ್ರೈ ಫ್ರೂಟ್ಸ್ ದರ ಏರಿಕೆಯಿಂದಾಗಿ ವ್ಯಾಪಾರ ಕೇವಲ 20 ಪ್ರತಿಶತಕ್ಕೆ ಕುಗ್ಗಿದೆ. ಪ್ರತಿದಿನ ರೂ.50,000 ದಿಂದ ರೂ. 60,000 ಮೌಲ್ಯದ ಡ್ರೈ ಫ್ರೂಟ್ ಮಾರಾಟ ಮಾಡುತ್ತಿದ್ದೆವು. ಈಗ ಮಾರಾಟವು ರೂ. 2,000ಕ್ಕೆ ಕುಸಿದಿದೆ ಎಂದು ನೋವು ತೋಡಿಕೊಂಡಿದ್ದಾರೆ.