ಶ್ರೀನಗರ(ಜಮ್ಮು-ಕಾಶ್ಮೀರ) : ಜಮ್ಮು-ಕಾಶ್ಮೀರದಿಂದ ಲಡಾಖ್ ವಿಭವಿಸಿ ಪ್ರತ್ಯೇಕವಾದ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಮೇಲೆ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ನಡೆಯುವ ಮುನ್ಸೂಚನೆ ಸಿಕ್ಕಿದೆ. ಈ ವರ್ಷದ ಕೊನೆಯಲ್ಲಿ ಜಮ್ಮು-ಕಾಶ್ಮೀರದ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ಧಾರೆ.
ಜಮ್ಮು-ಕಾಶ್ಮೀರದ ಕೇಂದ್ರಾಡಳಿತಕ್ಕೆ ರಾಜನಾಥ್ ಸಿಂಗ್ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಶುಕ್ರವಾರ ನಡೆದ ಮಹಾರಾಜ ಗುಲಾಬ್ ಸಿಂಗ್ ಅವರ ಪಟ್ಟಾಭಿಷೇಕದ 200ನೇ ವರ್ಷಾಚರಣೆಯ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಕ್ಷೇತ್ರಗಳಿಗೆ ಸಂಬಂಧಿಸಿದ ಗಡಿ ನಿರ್ಣಯಗಳನ್ನು ಪೂರ್ಣಗೊಳಿಸಲಾಗಿದೆ.
ಜಮ್ಮು-ಕಾಶ್ಮೀರದಲ್ಲಿ ಒಟ್ಟಾರೆ 90 ವಿಧಾನಸಭಾ ಕ್ಷೇತ್ರಗಳು ಇರಲಿವೆ. ಇದರಲ್ಲಿ ಜಮ್ಮುವಿಗೆ 43 ಮತ್ತು ಕಾಶ್ಮೀರದಲ್ಲಿ 47 ಕ್ಷೇತ್ರಗಳನ್ನು ಗುರುತಿಸಲಾಗಿದೆ ಎಂದರು. ಇದೇ ವೇಳೆ ಈ ವರ್ಷದ ಅಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಎಂದು ಅವರು ಹೇಳಿದ್ದಾರೆ. ಇತ್ತ, ಚುನಾವಣಾ ಆಯೋಗವು ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪ್ರಾರಂಭಿಸಿದೆ.
ಅಲ್ಲದೇ, ಆಗಸ್ಟ್ 31ರೊಳಗೆ ಮತದಾರರ ಕರಡು ಪಟ್ಟಿಯನ್ನು ಸಿದ್ಧಪಡಿಸಲು ನಿರ್ಧರಿಸಿದೆ. ಈ ಪ್ರಕ್ರಿಯೆ ಆರಂಭವಾದ ಎರಡೇ ದಿನಗಳಲ್ಲಿ ರಕ್ಷಣಾ ಸಚಿವರು ಸಹ ಚುನಾವಣೆ ನಡೆಯುವ ಮಾತುಗಳನ್ನಾಡಿದ್ದಾರೆ. ಈ ಹಿಂದೆ ಜಮ್ಮು-ಕಾಶ್ಮೀರದಲ್ಲಿ 87 ವಿಧಾನಸಭಾ ಕ್ಷೇತ್ರಗಳು ಇದ್ದವು.
ಇದರಲ್ಲಿ ಕಾಶ್ಮೀರ-46 ಮತ್ತು ಜಮ್ಮು-37 ಹಾಗೂ ಲಡಾಖ್ನಲ್ಲಿ 4 ಕ್ಷೇತ್ರಗಳು ಇದ್ದವು. ಆದರೆ, ಕೇಂದ್ರ ಸರ್ಕಾರ ಲಡಾಖ್ ವಿಭಜಿಸಿ ಪ್ರತ್ಯೇಕವಾದ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದೆ. ಆದರೆ, ಲಡಾಖ್ನಲ್ಲಿ ವಿಧಾನಸಭೆ ಇಲ್ಲ.
ಇದನ್ನೂ ಓದಿ: ಸೇನೆ ಸೇರುವ ಬಯಕೆ ಹೊಂದಿದ್ದ ರೈತನ ಮಗ 'ಅಗ್ನಿಪಥ' ಹಿಂಸಾಚಾರಕ್ಕೆ ಬಲಿ