ಪೂಂಚ್ (ಜಮ್ಮು- ಕಾಶ್ಮೀರ): ಅರಿವಿಲ್ಲದೆ ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಬಂದಿದ್ದ ಮಹಿಳೆಯನ್ನು ಪಾಕ್ ಅಧಿಕಾರಿಗಳು ಗುರುವಾರ ಭಾರತಕ್ಕೆ ಹಸ್ತಾಂತರಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮಂಡಿ ತಹಸಿಲ್ ಮೂಲದ 36 ವರ್ಷದ ಜರೀನಾ ಬಿ. ಎಂಬ ಮಹಿಳೆ ಸುಮಾರು ನಾಲ್ಕು ತಿಂಗಳ ಹಿಂದೆ ಗಡಿ ದಾಟಿ ಪಿಒಕೆ ತಲುಪಿದ್ದಳು. ಮಹಿಳೆಯ ಕುಟುಂಬಸ್ಥರು ಅವರನ್ನು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಈ ಸಂಬಂಧ ಮಂಡಿ ಮತ್ತು ಚೌಕಿ ಸೌಜಿಯಾನ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ: ಪ್ರಕರಣದ ತನಿಖೆ ಎನ್ಐಎ ಹೆಗಲಿಗೆ
ಕೆಲ ದಿನಗಳ ಬಳಿಕ ವಿಡಿಯೋವೊಂದರ ಮೂಲಕ ಜರೀನಾ ಪಾಕಿಸ್ತಾನದಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಪಾಕಿಸ್ತಾನದ ಅಧಿಕಾರಿಗಳನ್ನು ಸಂಪರ್ಕಿಸಿದ ಪೂಂಚ್ ಜಿಲ್ಲಾಡಳಿತ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಇದೀಗ ಮಹಿಳೆಯನ್ನು ಕರೆಯಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ನಾಲ್ಕು ತಿಂಗಳ ಬಳಿಕ ಮನೆಗೆ ಮರಳಿದ ಜರೀನಾರನ್ನು ಕಂಡ ಕುಟುಂಬವು ಪಾಕ್ ಹಾಗೂ ಪೂಂಚ್ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದೆ.