ರಾಂಪುರ (ಹಿಮಾಚಲ ಪ್ರದೇಶ): ಶಿಮ್ಲಾ ಜಿಲ್ಲೆಯ ರಾಮ್‌ಪುರ ಕ್ಷೇತ್ರದಲ್ಲಿ ಖಾಸಗಿ ವಾಹನದಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (ಇವಿಎಂ) ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪ ಕೇಳಿಬಂದ ಹಿನ್ನೆಲೆ ದತ್ತನಗರ ಪಂಚಾಯಿತಿ ಮತಗಟ್ಟೆಯ ಆರು ಜನ ಆರೋಪಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ದೂರನ್ನು ಸ್ವೀಕರಿಸಿದ ರಾಂಪುರದ ಎಸ್‌ಡಿಎಂ ಮತ್ತು ಡಿಎಸ್‌ಪಿ ಅವರು, ಪಕ್ಷದ 6 ಸದಸ್ಯರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಶನಿವಾರ ಸಂಜೆ ಮತದಾನ ಮುಗಿದ ಬಳಿಕ ಕಾಂಗ್ರೆಸ್ ಸದಸ್ಯೆ ಅಲ್ಕಾ ಲಂಬಾ ಟ್ವೀಟ್ ಮಾಡಿದಾಗ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
"ರಾಂಪುರದಲ್ಲಿ ಮತ್ತೊಮ್ಮೆ ಖಾಸಗಿ ವಾಹನದಲ್ಲಿ ಇವಿಎಂ ಯಂತ್ರಗಳು ಪತ್ತೆಯಾಗಿವೆ. ಜನರು ಇವಿಎಂ ಇದ್ದ ಖಾಸಗಿ ವಾಹನವನ್ನು ಸುತ್ತುವರೆದು ಪೊಲೀಸರ ಬರುವಿಕೆಗೆ ಕಾಯುತ್ತಿದ್ದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಆಡಳಿತಕ್ಕೆ ದೊಡ್ಡ ಸವಾಲು" ಎಂದು ಅಲ್ಕಾ ಲಾಂಬಾ ಟ್ವೀಟ್ ಮಾಡಿದ್ದಾರೆ.
ಇದು"ಪ್ರಜಾಪ್ರಭುತ್ವದ ಕೊಲೆ" ಎಂದು ಬಣ್ಣಿಸಿರುವ ಅವರು, ಚುನಾವಣೆ ಆಯೋಗದ ನಿಷ್ಕ್ರಿಯತೆ ಎತ್ತಿ ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ. "ಈಗ ತನ್ನ ವಿಶ್ವಾಸಾರ್ಹತೆ ಮತ್ತು ಆರೋಪಿಗಳನ್ನು ಉಳಿಸಲು ಚುನಾವಣಾ ಆಯೋಗವು ಈ ಬಗ್ಗೆ ಏನಾದರೂ ವಿವರಣೆಯನ್ನು ನೀಡುತ್ತದೆಯೇ?" ಎಂದು ಟ್ವಿಟ್ಟರ್ ನಲ್ಲಿ ಕೇಳಿದ್ದಾರೆ. ಹಿಮಾಚಲ ಕಾಂಗ್ರೆಸ್ ಸಹ ಚುನಾವಣಾ ಆಯೋಗದಿಂದ ಉತ್ತರವನ್ನು ಕೇಳಿದೆ. ಆದರೆ ಚುನಾವಣಾ ಆಯೋಗ ಇಲ್ಲಿಯವರೆಗೆ ಆಯವುದೇ ಪ್ರತಿಕ್ರಿಯೆ ನೀಡಿಲ್ಲ.
ಘಟನೆ ವಿವರ: ರಾಂಪುರ ಬುಶಹರ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇವಿಎಂ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ರಾಂಪುರ, ದತ್ತನಗರಕ್ಕೆ ಹೊಂದಿಕೊಂಡಿರುವ ಪಂಚಾಯಿತಿಯಲ್ಲಿ ಶನಿವಾರ ಸಂಜೆ ಮತದಾನ ಮುಗಿದ ಬಳಿಕ ಖಾಸಗಿ ವಾಹನದ ಮೂಲಕ ಇವಿಎಂ ಯಂತ್ರಗಳನ್ನು ರಾಂಪುರ ಸ್ಟ್ರಾಂಗ್ ರೂಂಗೆ ತರಲಾಗುತ್ತಿತ್ತು. ಅಷ್ಟರಲ್ಲಿ ಈ ವಿಷಯ ತಿಳಿದ ರಾಂಪುರ ಕಾಂಗ್ರೆಸ್ ಕಾರ್ಯಕರ್ತರು ಸ್ಥಳಕ್ಕಾಗಮಿಸಿ ರಾಷ್ಟ್ರೀಯ ಹೆದ್ದಾರಿ-5ರಲ್ಲಿ ವಾಹನ ನಿಲ್ಲಿಸಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ವಾಹನ ತಡೆದರು. ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕಾಗಮಿಸಿ, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ:ಬಿಹಾರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ರಾಜಕೀಯ ನಿಪುಣ ಪ್ರಶಾಂತ್ ಕಿಶೋರ್