ಹಜಾರಿಬಾಗ್ (ಜಾರ್ಖಂಡ್) : ಪ್ರೀತಿ ಯಾವಾಗ ಮತ್ತು ಯಾರ ಮೇಲೆ ಮೂಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರೀತಿಗೆ ದೇಶದ ಗಡಿಗಳ ಅಂತರವೂ ಇಲ್ಲ. ಇಂತಹ ಗಡಿ, ಎಲ್ಲೆ ಮೀರಿದ ಅಪರೂಪದ ಪ್ರೇಮಕ್ಕೆ ಜಾರ್ಖಂಡ್ನ ಸಣ್ಣ ಗ್ರಾಮವೊಂದು ಸಾಕ್ಷಿಯಾಗಿದೆ. ವಿದೇಶಿ ಮಹಿಳೆಯೊಬ್ಬರು ತನ್ನ ಪ್ರಿಯಕರನನ್ನು ಭೇಟಿಯಾಗಲು ದೂರದ ಪೋಲೆಂಡ್ನಿಂದ ಭಾರತಕ್ಕೆ ಆಗಮಿಸಿದ್ದಾರೆ. ಪ್ರಿಯಕರನನ್ನು ಮದುವೆಯಾಗಿ ಪೋಲೆಂಡ್‌ಗೆ ಕರೆದೊಯ್ಯಲು ಅವರು ನಿರ್ಧರಿಸಿದ್ದಾರೆ.
ಪೋಲೆಂಡ್ನ ಮಹಿಳೆ ಪೋಲಾಕ್ ಬಾರ್ಬರಾ ತನ್ನ ಪ್ರಿಯಕರ ಜಾರ್ಖಂಡ್ನ ಮೊಹಮ್ಮದ್ ಶದಾಬ್ನನ್ನು ಭೇಟಿ ಮಾಡಲು ತನ್ನ 8 ವರ್ಷದ ಮಗಳೊಂದಿಗೆ ಭಾರತಕ್ಕೆ ಬಂದಿದ್ದಾಳೆ. 45 ವರ್ಷ ವಯಸ್ಸಿನ ಬಾರ್ಬರಾಗೆ ಈಗಾಗಲೇ ಮದುವೆಯಾಗಿ ವಿಚ್ಛೇದನವಾಗಿದ್ದು, ತನಗಿಂತ 10 ವರ್ಷ ಕಿರಿಯನಾದ ಮೊಹಮ್ಮದ್ ಶದಾಬ್ನನ್ನು ಮದುವೆಯಾಗಲು ತೀರ್ಮಾನಿಸಿದ್ದಾರೆ.
2021ರಲ್ಲಿ ಪೋಲಾಕ್ ಮತ್ತು ಶದಾಬ್ಗೆ ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾಗಿದೆ. ಇಬ್ಬರು ಪರಸ್ಪರ ಚಾಟ್ ಮಾಡಿದ್ದು, ಪ್ರೇಮಾಂಕುರವಾಗಿದೆ. ನಂತರ ಪ್ರಿಯಕರನನ್ನು ಭೇಟಿ ಮಾಡಲು ಪೋಲಾಕ್ ಇಚ್ಛಿಸಿದ್ದರು. ಈ ಸಂಬಂಧ ಭಾರತಕ್ಕೆ ಬರಲು ವೀಸಾಕ್ಕೆ ಅರ್ಜಿ ಹಾಕಿದ್ದಾರೆ. ಬಹಳ ದೀರ್ಘ ಪ್ರಕ್ರಿಯೆಯ ನಂತರ ಪೋಲಾಕ್ ತನ್ನ ಪ್ರಿಯಕರ ಶದಾಬ್ನಲ್ಲಿ ಭೇಟಿಯಾಗಲು ಜಾರ್ಖಂಡ್ನ ಹಜಾರಿಬಾಗ್ಗೆ ಬಂದಿದ್ದಾರೆ.
ಪೋಲಾಕ್ ಶದಾಬ್ನನ್ನು ಜಾರ್ಖಂಡ್ನ ಹಜಾರಿಬಾಗ್ ಜಿಲ್ಲೆಯ ಕುತ್ರಾ ಗ್ರಾಮದಲ್ಲಿ ಭೇಟಿಯಾಗಿದ್ದಾರೆ. ಕಳೆದ ಐದು ದಿನಗಳಿಂದ ವಿದೇಶಿ ಮಹಿಳೆ, ಶದಾಬ್ ಜೊತೆಯಲ್ಲಿ ವಾಸಿಸುತ್ತಿದ್ದಾರೆ. ಭಾರತದ ವಾತಾವರಣಕ್ಕೆ ಹೊಂದಿಕೊಳ್ಳಲಾಗದ ಕಾರಣ ತನ್ನ ಪೋಲಾಕ್ಗೆ ಶದಾಬ್ ತನ್ನ ಮನೆಯಲ್ಲಿ ಎಸಿ ಅಳವಡಿಸಿದ್ದಾರೆ. ಅಲ್ಲದೇ ಪ್ರಿಯತಮೆಗೆ ಮನೋರಂಜನೆಗೆ ಕೊರತೆ ಉಂಟಾಗದಿರಲು ಹೊಸ ಟಿವಿಯೊಂದನ್ನು ಖರೀದಿಸಿ ತಂದಿದ್ದಾನೆ. ಇನ್ನೂ ಪ್ರಮುಖ ಅಂಶವೆಂದರೆ ಪೋಲಾಕ್ ಶದಾಬ್ಗೆ ಮನೆಕೆಲಸದಲ್ಲಿ ಸಹಾಯ ಮಾಡುತ್ತಿದ್ದಾಳೆ. ಸೆಗಣಿ ಬಾಚುವುದು, ಕಸ ಗುಡಿಸುವುದು ಮುಂತಾದ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ.
ವಿದೇಶಿ ಮಹಿಳೆ ತಮ್ಮ ಗ್ರಾಮಕ್ಕೆ ಆಗಮಿಸಿರುವ ಬಗ್ಗೆ ತಿಳಿದ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯನ್ನು ನೋಡಲು ಮುಗಿಬೀಳುತ್ತಿದ್ದಾರೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಪೋಲಾಕ್, "ಭಾರತ ಅತ್ಯಂತ ಸುಂದರ ದೇಶ. ಇಲ್ಲಿನ ಜನರು ತುಂಬಾ ಕರುಣಾಮಯಿಗಳು. ಪ್ರೀತಿ ಉಳ್ಳವರಾಗಿದ್ದಾರೆ. ಆದರೆ ಜನರು ನನ್ನನ್ನು ಯಾವಾಗಲೂ ಸುತ್ತುವರೆಯುತ್ತಿರುವುದು ಬೇಸರ ತಂದಿದೆ" ಎಂದರು.
ವಿದೇಶಿ ಮಹಿಳೆಯು ಗ್ರಾಮಕ್ಕೆ ಆಗಮಿಸಿರುವ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ವಿಚಾರಿಸಿದ್ದಾರೆ. ಹಜಾರಿಬಾಗ್ ಡಿಎಸ್ಪಿ ರಾಜೀವ್ ಕುಮಾರ್ ಖುತ್ರಾ ಮಾತನಾಡಿ, "ಗ್ರಾಮಕ್ಕೆ ವಿದೇಶಿ ಮಹಿಳೆಯೊಬ್ಬರು ಬಂದಿದ್ದಾರೆ. ನಾನು ಅವರೊಂದಿಗೆ ಮಾತನಾಡಿದೆ. ಅವರು ಕೆಲವು ದಿನಗಳಲ್ಲಿ ತನ್ನ ದೇಶಕ್ಕೆ ಹಿಂತಿರುಗುವುದಾಗಿ ಹೇಳಿದ್ದಾರೆ. ಪ್ರಿಯಕರ ಶದಾಬ್ನ ವೀಸಾಕ್ಕಾಗಿ ಅವರು ಪ್ರಯತ್ನಿಸುತ್ತಿದ್ದಾರೆ. ಇದು ಸರಿಯಾದ ಕೂಡಲೇ ಅವರು ಶದಾಬ್ನೊಂದಿಗೆ ಪೋಲೆಂಡ್‌ಗೆ ತೆರಳುತ್ತಾರೆ" ಎಂದು ಹೇಳಿದರು.
ಈ ಹಿಂದೆ ಪಾಕಿಸ್ತಾನದ ನಾಲ್ಕು ಮಕ್ಕಳ ತಾಯಿಯೊಬ್ಬಳು ತನ್ನ ಪ್ರಿಯಕರನನ್ನು ಭೇಟಿ ಮಾಡಲು ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಳು. ಈ ಬಗ್ಗೆ ತಿಳಿದ ಪೊಲೀಸರು ಆಕೆಯನ್ನು ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದರು. ಬಳಿಕ ಪ್ರಿಯಕರನನ್ನು ಜಾಮೀನಿನ ಮೇರೆಗೆ ಬಿಡುಗಡೆ ಮಾಡಲಾಗಿತ್ತು.
ಇದನ್ನೂ ಓದಿ : ಪಾಕ್ ISI ಬಗ್ಗೆ ನಾನು ಕೇಳಿಯೇ ಇಲ್ಲ.. ಸೀಮಾ ಹೈದರ್‌ಗೆ ATS ಕೇಳಿದ 13 ಪ್ರಶ್ನೆಗಳು ಹಾಗೂ ಆಕೆ ಕೊಟ್ಟ ಉತ್ತರ ಇಲ್ಲಿದೆ..