ಬಿಜ್ನೋರ್(ಉತ್ತರ ಪ್ರದೇಶ): ಇಂದಿನ ಆಧುನಿಕ ಜಗತ್ತಿನಲ್ಲಿ ಶಿಕ್ಷಣ ಸಿಕ್ಕಾಪಟ್ಟೆ ದುಬಾರಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪೋಷಕರು ಲಕ್ಷಾಂತರ ರೂಪಾಯಿ ಖರ್ಚು ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಅನೇಕ ಹಳ್ಳಿಗಳಲ್ಲಿ ಇಂದಿಗೂ ಮಕ್ಕಳು ಉತ್ತಮ ಶಿಕ್ಷಣದಿಂದ ವಂಚಿತರಾಗ್ತಿದ್ದಾರೆ. ಆದರೆ, ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಮಂಡವಾಲಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪಿಆರ್ಬಿ ಪೊಲೀಸ್ ಕಾನ್ಸ್ಟೇಬಲ್ವೋರ್ವರ ಕಾರ್ಯಕ್ಕೆ ಎಲ್ಲರೂ ಸಲಾಂ ಹೇಳುತ್ತಿದ್ದಾರೆ.
ಪೊಲೀಸ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿರುವ ವಿಕಾಸ್ ಕುಮಾರ್ ಬಿಡುವಿನ ಸಮಯದಲ್ಲಿ ಗ್ರಾಮದ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಕೆಲಸ ಮಾಡ್ತಿದ್ದಾರೆ. ಮಕ್ಕಳಲ್ಲಿ ಪೊಲೀಸರ ಬಗ್ಗೆ ಇರುವ ಭಯ ಹೋಗಲಾಡಿಸುವ ಉದ್ದೇಶದಿಂದ ಸಮವಸ್ತ್ರದಲ್ಲೇ ಪಾಠ ಹೇಳ್ತಾರೆ. ಬಡ ಮಕ್ಕಳು ಸಾವಿರಾರು ರೂಪಾಯಿ ಖರ್ಚು ಮಾಡಿ ಟ್ಯೂಷನ್ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಕೆಲಸ ಮಾಡ್ತಿದ್ದಾರೆ. ಇವರ ಸಾಮಾಜಮುಖಿ ಕಾರ್ಯಕ್ಕೆ ಪ್ರಶಸ್ತಿ ಸಹ ನೀಡಿ, ಗೌರವಿಸಲಾಗಿದೆ.
ಇದನ್ನೂ ಓದಿ: ಆಕ್ಸಿಡೆಂಟ್ ಆದ ವ್ಯಕ್ತಿಯನ್ನ ತಮ್ಮದೇ ಕಾರ್ನಲ್ಲಿ ಆಸ್ಪತ್ರೆಗೆ ಸಾಗಿಸಿದ ಹೆಡ್ಕಾನ್ಸ್ಟೇಬಲ್!
ವಿಕಾಸ್ ಕುಮಾರ್ ತಮ್ಮ ಹಳ್ಳಿಯಲ್ಲಿ ಮಾತ್ರವಲ್ಲ. ಪಕ್ಕದ ಹಳ್ಳಿಗಳಿಗೂ ಭೇಟಿ ನೀಡುತ್ತಾರೆ. ಅಲ್ಲಿನ ಮಕ್ಕಳಿಗೆ ಉಚಿವಾಗಿ ಪಾಠ ಮಾಡ್ತಾರೆ. ತಾವು ಪಾಠ ಮಾಡಲು ಹೋಗುವ ಸ್ಥಳಗಳಿಗೆ ಸಮವಸ್ತ್ರ ಧರಿಸಿಕೊಂಡು ಹೋಗುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ವಿಕಾಸ್ ಕುಮಾರ್, ತಾವು ಶಿಕ್ಷಣ ಪಡೆದುಕೊಳ್ಳುವ ಸಂದರ್ಭದಲ್ಲಿ ಅನೇಕ ರೀತಿಯ ಸಮಸ್ಯೆ ಎದುರಿಸಿದ್ದೇನೆ. ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಉಚಿತವಾಗಿ ಪಾಠ ಮಾಡಲು ನಿರ್ಧರಿಸಿರುವೆ. ಹೀಗಾಗಿ, ಹಳ್ಳಿಯಿಂದ ಹಳ್ಳಿಗೆ ತೆರಳಿ ಪಾಠ ಮಾಡ್ತಿದ್ದೇನೆ ಎಂದಿದ್ದಾರೆ. ಪೊಲೀಸ್ ಇಲಾಖೆಗೆ ಆಯ್ಕೆಯಾಗುವುದಕ್ಕೂ ಮುಂಚಿತವಾಗಿ ವಿಕಾಸ್, ಶಾಲೆವೊಂದರಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.