ಆಗ್ರಾ (ಉತ್ತರ ಪ್ರದೇಶ): ಇಲ್ಲಿನ ಸಿಕಂದ್ರ ಪ್ರದೇಶದ ವಸತಿ ಅಭಿವೃದ್ಧಿ ಸೆಕ್ಟರ್ 14ರಲ್ಲಿ ಪಾಸ್ಪೋರ್ಟ್ ಇಲ್ಲದೇ ಅಕ್ರಮವಾಗಿ ನೆಲೆಸಿದ್ದ 40 ಮಂದಿ ಬಾಂಗ್ಲಾದೇಶಿಯರನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ ಎಂದು ಸಿಟಿ ಡಿಸಿಪಿ ವಿಕಾಸ್ ಕುಮಾರ್ ಮಾಹಿತಿ ನೀಡಿದ್ದಾರೆ. ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದ್ದು, ನಕಲಿ ಆಧಾರ್ ಮತ್ತು ಪ್ಯಾನ್ ಕಾರ್ಡ್ ಹೊಂದಿ ವಾಸಿಸುತ್ತಿದ್ದ 15 ಮಂದಿ ಪುರುಷರು, 13 ಮಂದಿ ಮಹಿಳೆಯರು ಮತ್ತು 12 ಮಂದಿ ಮಕ್ಕಳನ್ನು ಬಂಧಿಸಲಾಗಿದೆ ಎಂದು ಆಗ್ರಾ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಸಿಕಿಂದ್ರ, ಜಗದೀಶ್ಪುರ, ಹರಿಪರ್ವತ್ ಪೊಲೀಸ್ ಠಾಣೆಯ ಪೊಲೀಸರು ಭಾನುವಾರ ಇಲ್ಲಿನ ಹೌಸಿಂಗ್ ಡೆವೆಲಪ್ಮೆಂಟ್ ಸೆಕ್ಟರ್ 14ರಲ್ಲಿನ ಖಾಲಿ ನಿವೇಶನದಲ್ಲಿ ಹುಲ್ಲಿನ ಗುಡಿಸಲು ಹಾಕಿಕೊಂಡು ಅನಧಿಕೃತವಾಗಿ ಹೆಚ್ಚಿನ ಪ್ರಮಾಣದಲ್ಲಿ ಬಾಂಗ್ಲಾದೇಶಿಗರು ವಾಸವಾಗಿರುವುದು ತಿಳಿದು ಬಂದಿತ್ತು. ಈ ಹಿನ್ನೆಲೆ ಈ ಕುರಿತು ತನಿಖೆಗೆ ಮುಂದಾಗಿದ್ದು, ಅವರನ್ನೆಲ್ಲಾ ಬಂಧಿಸಲಾಗಿದೆ. ಬಾಂಗ್ಲಾದೇಶಿಯರನ್ನು ಅಕ್ರಮವಾಗಿ ಇಲ್ಲಿಗೆ ಕರೆತಂದ ಕಿಂಗ್ಪಿನ್ಗೆ ಹುಡುಕಾಟ ನಡೆಸಲಾಗಿದೆ. ಇವರೆಲ್ಲರೂ ಬಂಗಾಳದ ಗಡಿ ದಾಟಿ ಬಿಹಾರ ಮೂಲಕ ಭಾರತಕ್ಕೆ ಬಂದಿದ್ದಾರೆ. ಬಿಹಾರದಿಂದ ಬಳಿಕ ಉತ್ತರ ಪ್ರದೇಶಕ್ಕೆ ಬಂದಿದ್ದು, ತಲಾ ವ್ಯಕ್ತಿಗೆ 20 ಸಾವಿರ ನೀಡುವ ಒಪ್ಪಂದದಿಂದ ಕರೆತರಲಾಗಿದೆ ಎಂದು ಸಿಟಿ ಡಿಸಿಪಿ ಮಾಹಿತಿ ನೀಡಿದರು.
ಇನ್ನು, ಮಥುರಾದಲ್ಲಿ ಕೂಡ ಪಾಸ್ಪೋರ್ಟ್ ಇಲ್ಲದೇ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾದೇಶಿ ವ್ಯಕ್ತಿಯನ್ನು ಬಂಧಿಸಲಾಗಿದೆ. ಈತ ಇತರೆ ದೇಶದವರನ್ನು ಮತ್ತು ರೋಹಿಂಗ್ಯಾಗಳನ್ನು ಭಾರತದಲ್ಲಿ ಅಕ್ರಮವಾಗಿ ಇರಲು ಅವಕಾಶ ನೀಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಾಂಗ್ಲಾದೇಶದ ಖುಲ್ನಾ ಜಿಲ್ಲೆಯ ಮಹೊಮ್ಮದ್ ಕಮರುಲ್ ನನ್ನು ಶನಿವಾರ ಸಂಜೆ ನೇ ಬಸ್ತಿ ಪ್ರದೇಶದಲ್ಲಿ ಬಂಧಿಸಲಾಗಿದೆ. ಆಗ್ರಾದಿಂದ ಬಾಂಗ್ಲಾದೇಶದ ಪ್ರಜೆಯೊಬ್ಬ ಬರುತ್ತಿರುವ ಬಗ್ಗೆ ಸೇನೆ ನೀಡಿದ ಸುಳಿವಿನ ಮೇರೆಗೆ ಬಲೆ ಬೀಸಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಭಾರತದ ಗಡಿ ದಾಟಿಸಿ, ದೇಶದ ವಿವಿಧ ರಾಜ್ಯಗಳಲ್ಲಿ ಬಾಂಗ್ಲಾದೇಶಿಗರು ಮತ್ತು ರೋಹಿಂಗ್ಯಾಗಳನ್ನು ಅಕ್ರಮವಾಗಿ ನೆಲೆಸಲು ಕಮರುಲ್ ತಲಾ ವ್ಯಕ್ತಿಗೆ 40 ಸಾವಿರ ಪಡೆಯುತ್ತಿದ್ದ. ನಕಲಿ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಮೂಲಕ ಅಕ್ರಮವಾಗಿ ಅವರನ್ನೆಲ್ಲಾ ಭಾರತದ ಗಡಿಯೊಳಗೆ ಆತ ಕರೆ ತರುತ್ತಿದ್ದ. ಆತ ಬಳಿ ಇದ್ದ ಬಾಂಗ್ಲಾದೇಶ ಮತ್ತು ಭಾರತದ ಸಿಮ್ ಕಾರ್ಡ್ ಅನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ 135 ಬಾಂಗ್ಲಾದೇಶಿಗರನ್ನು ಸ್ಥಳೀಯ ಗುಪ್ತಚರ ಘಟಕದ ಮಾಹಿತಿ ಮೇರೆಗೆ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಅಂತಾರಾಷ್ಟ್ರೀಯ ಗಡಿ ಮೂಲಕ ಒಳ ನುಸುಳುವ ಬಾಂಗ್ಲಾದೇಶಿಗರು ತಾವು ಪಶ್ಚಿಮ ಬಂಗಾಳದ ಸ್ಥಳೀಯರೆಂದು ಬಿಂಬಿಸಿಕೊಳ್ಳುವ ನಕಲಿ ಆಧಾರ್ ಕಾರ್ಡ್ ಮತ್ತು ಇತರೆ ಗುರುತಿನ ಚೀಟಿಯ ಮೂಲಕ ದೇಶದ ವಿವಿಧ ಭಾಗಗಳಲ್ಲಿ ನೆಲೆಸುತ್ತಿದ್ದು, ಕಟ್ಟಡ ಕಾರ್ಯ, ಕಾರ್ಖಾನೆ ಮತ್ತು ಇನ್ನಿತರ ಕಾರ್ಮಿಕ ಕಾರ್ಯದಲ್ಲಿ ತೊಡಗುತ್ತಿದ್ದಾರೆ. ಅಕ್ರಮವಾಗಿ ಬಾಂಗ್ಲಾದೇಶಿಗರು ಭಾರತದ ನೆಲೆಸುತ್ತಿರುವ ಪ್ರಕರಣಗಳು ವರದಿ ಆಗುತ್ತಿರುವ ಹಿನ್ನೆಲೆ ಸೆಕ್ಯೂರಿಟಿ ಆಲರ್ಟ್ ಮಾಡಲಾಗಿದೆ.
ಇದನ್ನೂ ಓದಿ: ಗೃಹಸಾಲ ಉಳಿತಾಯವಲ್ಲ ಹೇಳಿಕೆ ಹಿಂಪಡೆಯಿರಿ: ಹಣಕಾಸು ಕಾರ್ಯದರ್ಶಿಗೆ ಚಿದಂಬರಂ ಒತ್ತಾಯ