ಚೆನ್ನೈ(ತಮಿಳುನಾಡು): ನಗರದ ಜನಪ್ರಿಯ ಖಾಸಗಿ ಮಾಲ್‌ನಲ್ಲಿ ಮೇ 21 ರಂದು ನಡೆದ ಡಿ ಜೆ ಶೋನಲ್ಲಿ ಅತಿಯಾಗಿ ಮದ್ಯ ಸೇವಿಸಿದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ. ಅಲ್ಲದೇ, ಶೋ ಅನ್ನು ನಿಲ್ಲಿಸಲು ಬಂದ ಪೊಲೀಸರ ವಿರುದ್ಧವೇ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ನಿಂದಿಸಿದವರ ವಿರುದ್ಧ ಕೇಸ್ ಜಡಿಯಲು ಪೊಲೀಸರು ಮುಂದಾಗಿದ್ದಾರೆ.
'ದಿ ಗ್ರೇಟ್ ಇಂಡಿಯನ್ ಗ್ಯಾದರಿಂಗ್ಸ್’ ಶೀರ್ಷಿಕೆಯಡಿ ಡಿಜೆ ಶೋ ನಡೆಸಲಾಗಿದೆ. ಈ ಪಾರ್ಟಿಯಲ್ಲಿ ಬ್ರೆಜಿಲ್ನ ವಿಶ್ವವಿಖ್ಯಾತ ಡಿಜೆ ಮಂದ್ರ ಗೋರಾ ಭಾಗವಹಿಸಿದ್ದರು. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕ ಯುವತಿಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಡಿಪಾಕ್ಕಂನ ಖಾಸಗಿ ಐಟಿ ಕಂಪನಿಯ ಉದ್ಯೋಗಿಯೊಬ್ಬರು ಅತಿಯಾದ ಮದ್ಯ ಸೇವನೆಯಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದರು.
ಸ್ನೇಹಿತರು ಆತನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದಾಗ ಅವರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ನಂತರ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಅಲ್ಲಿ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಈ ವಿಷಯ ತಿಳಿದ ಪೊಲೀಸರು ಅಕ್ರಮ ಮದ್ಯ ಕೂಟವನ್ನು ತಡೆಯಲು ಬಂದಾಗ ಡಿಜೆ ಮಂದ್ರ ಗೋರಾ ಮತ್ತು ಯುವಕರು ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ಟೀಕಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅನುಮತಿ ಕಾಫಿ ಶಾಪ್ಗೆ, ಇಟ್ಟಿದ್ದು ಬಾರ್: ಮದ್ಯಕೂಟದ ಮೇಲೆ ದಾಳಿ ನಡೆಸಿದ ಪೊಲೀಸರು ಅಲ್ಲಿದ್ದವರನ್ನು ಓಡಿಸಿದ್ದಾರೆ. ವಿಚಾರಣೆಯಲ್ಲಿ ಡಿಜೆ ಕಾರ್ಯಕ್ರಮಕ್ಕೆ ಪೊಲೀಸರಿಂದ ಅನುಮತಿ ಪಡೆದಿರಲಿಲ್ಲ ಎಂಬುದು ಗೊತ್ತಾಗಿದೆ. ಅಲ್ಲದೇ, ಡಿಜೆ ಶೋ ಹೆಸರಿನಲ್ಲಿ ಅಕ್ರಮವಾಗಿ ಲಿಕ್ಕರ್ ಪಾರ್ಟಿ ನಡೆಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಕಾಫಿ ಶಾಪ್ ನಡೆಸಲು ಪರವಾನಗಿ ಪಡೆದು ಅಲ್ಲಿ ಬಾರ್ ನಡೆಸುತ್ತಿರುವುದು ಗೊತ್ತಾಗಿ ಬಾರ್ ಅನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಅನುಮತಿ ಪಡೆಯದೇ ಡಿಜೆ ಶೋ ಆಯೋಜಿಸಿದ್ದ ಖಾಸಗಿ ವ್ಯವಸ್ಥಾಪಕರಾದ ನಿಕಾಶ್ ಬೋಜರಾಜ್, ಭಾರತಿ ಹಾಗೂ ಬಾರ್ ಉದ್ಯೋಗಿ ಎಡ್ವಿನ್ ಎಂಬುವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇನ್ನೂ ಮೂವರು ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಟೀಕೆ: ಡಿಜೆ ಶೋ ಮೇಲಿನ ಪೊಲೀಸರ ಕ್ರಮವನ್ನು ಶೋ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಖಂಡಿಸಿದ್ದಾರೆ. ಪಾರ್ಟಿಯಲ್ಲಿ ಭಾಗವಹಿಸಿದ್ದ ವಿಶ್ವವಿಖ್ಯಾತ ಬ್ರೆಜಿಲಿಯನ್ ಡಿಜೆ ಮಂತ್ರ ಗೋರಾ ಕೂಡ ಚೆನ್ನೈ ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದವರಲ್ಲಿ ಟ್ವಿಟ್ಟರ್ ಐಡಿ ಬಳಕೆ ಮಾಡಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರ ವಿರುದ್ಧವೂ ಪ್ರಕರಣ ದಾಖಲಿಸಲು ನಿರ್ಧರಿಸಿದ್ದಾರೆ.
ಓದಿ: ಕೆಡವಲಾದ ದೇವಾಲಯಗಳ ಭೂಮಿಯಲ್ಲಿ ದರ್ಗಾ ನಿರ್ಮಾಣ: ಎಂಎನ್‌ಎಸ್ ಆರೋಪ