ಕಾನ್ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಕಾನ್ಪುರದಲ್ಲಿ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ) ನ್ಯಾಯಾಲಯದ ಗುಮಾಸ್ತ (ಕ್ಲರ್ಕ್) ಎರಡು ತಿಂಗಳ ಹಿಂದೆ ಬಂಧನಕ್ಕೊಳಗಾದ ಅತ್ಯಾಚಾರ ಪ್ರಕರಣದ ಆರೋಪಿಯ ಬಿಡುಗಡೆಗಾಗಿ ನಕಲಿ ಜಾಮೀನು ಆದೇಶ ಪತ್ರವನ್ನು ಸೃಷ್ಟಿರುವುದು ವರದಿಯಾಗಿದೆ.
ನಕಲಿ ಜಾಮೀನಿನ ಮೇಲೆಯೇ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ನರೇಂದ್ರ ಸಚನ್ ಎಂಬಾತ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಅಲ್ಲದೇ, ಆರೋಪಿ ಸಂತ್ರಸ್ತೆ ಮನೆಗೆ ಹೋಗಿ ಆಕೆಯ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾನೆ. ತನ್ನ ವಿರುದ್ಧ ನೀಡಿರುವ ಕೇಸ್ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಕೊಲೆ ಮಾಡುವುದಾಗಿ ಆರೋಪಿ ಹೆದರಿಸಿದ್ದಾನೆ. ಇದರಿಂದ ಸಂತ್ರಸ್ತೆಯ ಕುಟುಂಬಸ್ಥರು ಆರೋಪಿಯ ಕುರಿತು ಮತ್ತೆ ಪೊಲೀಸರು ಮೊರೆ ಹೋಗಿದ್ದಾರೆ. ಆಗ ಆರೋಪಿ ನಕಲಿ ಜಾಮೀನಿನ ಮೇಲೆ ಹೊರಬಂದಿರುವುದು ಬೆಳಕಿಗೆ ಬಂದಿದೆ.
ಜಾಮೀನು ತಿರಸ್ಕಾರವಾದರೂ ಹೊರಬಂದಿದ್ದ!: ಆರೋಪಿ ನರೇಂದ್ರ ಸಚನ್ ಜೂನ್ 16ರಂದು ತನ್ನ ನೆರೆಮನೆಯ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಬಾಲಕಿ ಕುಟುಂಬಸ್ಥರು ಕೆಲಸಕ್ಕೆಂದು ಹೊರಗಡೆ ಹೋದಾಗ ಒಬ್ಬಳೇ ಇರುವ ಸಮಯ ನೋಡಿಕೊಂಡು ದುಷ್ಕೃತ್ಯ ಎಸಗಿದ್ದ. ಸಂತ್ರಸ್ತೆಯ ತಂದೆಯ ವಿಚಾರಿಸುವ ನೆಪ ಮಾಡಿಕೊಂಡು ಮನೆಗೆ ನುಗ್ಗಿದ್ದ. ನಂತರ ಪೋಷಕರು ಮನೆಗೆ ಮರಳಿದಾಗ ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದು ಬೆಳಕಿಗೆ ಬಂದಿತ್ತು.
ಅಂತೆಯೇ, ಸಂತ್ರಸ್ತೆಯ ತಂದೆ ನೀಡಿದ ದೂರಿನ ಮೇರೆಗೆ ಜೂನ್ 8ರಂದು ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಜೈಲಿಗೂ ಕಳುಹಿಸಿದ್ದರು. ಇದರಿಂದ ಜಾಮೀನು ಕೋರಿ ಪೋಕ್ಸೋ ನ್ಯಾಯಾಲಯದಲ್ಲಿ ಆರೋಪಿ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನು ಕೋರ್ಟ್ ವಜಾ ಮಾಡಿತ್ತು. ಅಲ್ಲದೇ, ಜಾಮೀನು ತಿರಸ್ಕರಿಸಿದ ಆದೇಶವನ್ನು ಇ-ಕೋರ್ಟ್ ಪೋರ್ಟಲ್ನಲ್ಲಿಯೂ ಪ್ರಕಟಿಸಲಾಗಿತ್ತು. ಆದರೆ, ಇದಾದ ನಂತರ ಜೈಲಿನಿಂದ ಆರೋಪಿ ಬಿಡುಗಡೆಗೊಂಡಿದ್ದಾನೆ.
ವಕೀಲರ ಜೊತೆ ಸೇರಿ ನಕಲಿ ಆದೇಶ ಸೃಷ್ಟಿ!: ನ್ಯಾಯಾಲಯವು ಜಾಮೀನು ತಿರಸ್ಕಾರ ಮಾಡಿದ್ದರೂ ಆರೋಪಿ ಜೈಲಿನಿಂದ ಹೊರಬಂದ ಸಂತ್ರಸ್ತೆಯ ವಕೀಲರು ವಿಚಾರಣೆ ಮಾಡಿದ್ದಾರೆ. ಆಗ ಆರೋಪಿ ಪರ ವಕೀಲರ ಜೊತೆಗೂಡಿ ಕೋರ್ಟ್ನ ಕ್ಲರ್ಕ್, ಜಾಮೀನು ತಿರಸ್ಕರಿಸಿದ ಆದೇಶವನ್ನೂ ಜಾಮೀನು ಎಂಬಂತೆ ಸೃಷ್ಟಿಸಿರುವುದು ಬಯಲಾಗಿದೆ. ಈ ಕುರಿತು ಜಂಟಿ ಪೊಲೀಸ್ ಆಯುಕ್ತ ಆನಂದ್ ಪ್ರಕಾಶ್ ತಿವಾರಿ ಪ್ರತಿಕ್ರಿಯಿಸಿದ್ದು, ''ಶೀಘ್ರವೇ ಆರೋಪಿ, ಆತನ ವಕೀಲ ಹಾಗೂ ಕ್ಲರ್ಕ್ನನ್ನು ಬಂಧಿಸಲಾಗುತ್ತದೆ'' ಎಂದು ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ.. ಆರೋಪಿಗಳಿಗಾಗಿ ಪೊಲೀಸರ ಶೋಧ