ಹೈದರಾಬಾದ್: ಜನವರಿ 19ರಂದು ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣಕ್ಕೆ ಭೇಟಿ ನೀಡಲಿದ್ದು, 7,000 ಕೋಟಿ ರೂಪಾಯಿ ಮೌಲ್ಯದ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಹೈದರಾಬಾದ್ ಮತ್ತು ವಿಶಾಖಪಟ್ಟಣಂನ ನಡುವೆ ಸಾಗಲಿರುವ ವಂದೇ ಭಾರತ್ ರೈಲಿಗೂ ಅವರು ಚಾಲನೆ ನೀಡುವರು.
ಕಾರ್ಯಕ್ರಮಗಳ ವಿವರ: ಜನವರಿ 19 ರಂದು ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲಿಗೆ ಬೆಳಿಗ್ಗೆ 10 ಗಂಟೆಗೆ ಪ್ರಧಾನಿ ಹಸಿರು ನಿಶಾನೆ ನೀಡಲಿದ್ದಾರೆ. ಸಿಕಂದರಾಬಾದ್ ಮತ್ತು ವಿಶಾಖಪಟ್ಟಣಂ ನಡುವೆ ಸರಿಸುಮಾರು 8 ಗಂಟೆಗಳ ಕಾಲ ಸಂಚಲಿಸಲಿರುವ ರೈಲು ಸಂಚರಿಸಲಿದೆ. ಈ ಮೂಲಕ ದೇಶದ 8ನೇ ವಂದೇ ಭಾರತ್ ರೈಲಿಗೆ ಚಾಲನೆ ದೊರೆಯಲಿದೆ. ವಾರಂಗಲ್, ಖಮ್ಮಂ, ವಿಜಯವಾಡ ಮತ್ತು ರಾಜಮಂಡ್ರಿ ನಿಲ್ದಾಣಗಳಲ್ಲಿ ರೈಲಿಗೆ ಮಧ್ಯಂತರ ನಿಲುಗಡೆ ನೀಡಲಾಗಿದೆ.
ಇದಾದ ಬಳಿಕ ಪ್ರಧಾನಿ 699 ಕೋಟಿ ರೂಪಾಯಿ ವೆಚ್ಚದ ಸಿಕಂದರಾಬಾದ್ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿ ಅವರ ಕಚೇರಿಯ ಪ್ರಕಟಣೆ ತಿಳಿಸಿದೆ. ಇದರೊಂದಿಗೆ 1,850 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸುಮಾರು 150 ಕಿ.ಮೀ ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಮೋದಿ ಭೂಮಿಪೂಜೆ ನೆರವೇರಿಸುವರು. ಈ ಯೋಜನೆ, ಮಹಬೂಬ್‌ನಗರ-ಚಿಂಚೋಳಿ ವಿಭಾಗದಲ್ಲಿ 103 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ 167N ಮತ್ತು NH-161B ಯ ನಿಜಾಂಪೇಟ್-ನಾರಾಯಣಖೇಡ್-ಬೀದರ್ ವಿಭಾಗದಲ್ಲಿ 46 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ರಸ್ತೆಗಳನ್ನು ಒಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
ಇದೇ ಕಾರ್ಯಕ್ರಮದಲ್ಲಿ ಒಟ್ಟಿಗೆ 521 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಜಿಪೇಟೆಯಲ್ಲಿ ನಿರ್ಮಿಸಲಿರುವ ರೈಲ್ವೇ ಆವರ್ತಕ ಕೂಲಂಕಷ ಪರೀಕ್ಷೆ (POH) ಕಾರ್ಯಾಗಾರದ ನಿರ್ಮಾಣಕ್ಕೆ ಪ್ರಧಾನಿ ಅಡಿಪಾಯ ಹಾಕಲಿದ್ದಾರೆ. ಇದರ ನಿರ್ಮಾಣದ ನಂತರ ರೈಲಿನ ಕೋಚ್‌ಗಳ ಸವೆತವಾಗಿದ್ದರೆ, ರಚನಾತ್ಮಕ ಹಾನಿ ಮತ್ತು ಕೋಚ್‌ಗಳ ಫಿಟ್‌ನೆಸ್ ಖಚಿತಪಡಿಸಿಕೊಳ್ಳಲು ವಿಮರ್ಶಾತ್ಮಕವಾಗಿ ಆವರ್ತಕ ಕೂಲಂಕಷ ಪರೀಕ್ಷೆ ನಡೆಸಲಾಗುತ್ತದೆ. ಈ POH ಅನ್ನು ನಿರ್ಮಿಸಲು ಟೆಂಡರ್ ಅನ್ನು ನಿಯೋಜಿಸಲಾಗಿದ್ದು, ಈ ಯೋಜನೆಯು ಒಟ್ಟು 3,000 ಜನರಿಗೆ ನೇರ ಉದ್ಯೋಗವನ್ನು ಸೃಷ್ಟಿಸುವ ನಿರೀಕ್ಷೆಯಿದೆ.
1,410 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ಸಿಕಂದರಾಬಾದ್ ಮತ್ತು ಮಹಬೂಬ್‌ನಗರ ನಡುವೆ 85 ಕಿಮೀ ಉದ್ದದ ಡಬ್ಲಿಂಗ್ ರೈಲು(ಡಬಲ್ ಟ್ರಾಕ್) ಮಾರ್ಗವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಹಾಗೆಯೇ ಮುಖ್ಯವಾಗಿ 2,597 ಕೋಟಿ ರೂ ವೆಚ್ಚದಲ್ಲಿ 5,000 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ಹೈದರಾಬಾದ್‌ನ ಐಐಟಿಯಲ್ಲಿ ನಿರ್ಮಿಸಲಾದ ವಿವಿಧ ಕಟ್ಟಡಗಳನ್ನು ಕೂಡ ಅವರು ಉದ್ಘಾಟಿಸುವ ಮೂಲಕ ದೇಶಕ್ಕೆ ಸಮರ್ಪಿಸಲಿದ್ದಾರೆ.
ಈ ಕಟ್ಟಡದಲ್ಲಿ ಪ್ರತಿ ವಿಭಾಗದಲ್ಲಿ ಶೈಕ್ಷಣಿಕ ಕಟ್ಟಡಗಳು, 4,500 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ 18 ಹಾಸ್ಟೆಲ್, ಹಾಗೆಯೇ 250 ಸಿಬ್ಬಂದಿಯ ಕುಟುಂಬಗಳಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಜೊತೆಗೆ ತಂತ್ರಜ್ಞಾನ ಸಂಶೋಧನಾ ಪಾರ್ಕ್, ತಂತ್ರಜ್ಞಾನ ಆವಿಷ್ಕಾರ ಪಾರ್ಕ್, ಸಂಶೋಧನಾ ಕೇಂದ್ರ ಸಂಕೀರ್ಣ, ಸಮಾವೇಶ ಕೇಂದ್ರ, ಜ್ಞಾನ ಕೇಂದ್ರ, ಇತರವುಗಳನ್ನು ಈ ಕಟ್ಟಡ ಒಳಗೊಂಡಿರಲಿದೆ.
ಈ ಎಲ್ಲಾ ಕಾರ್ಯಕ್ರಮಗಳ ನಂತರ ಮೋದಿ ಅವರು ಪರೇಡ್ ಮೈದಾನದಲ್ಲಿ ಆಯೋಜಿಸಲಾದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಲೋಕಸಭಾ ಸದಸ್ಯ ಬಂಡಿ ಸಂಜಯ್ ಕುಮಾರ್ ಮತ್ತು ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಕೆ.ಲಕ್ಷ್ಮಣ್ ಅವರು ಸಿಕಂದರಾಬಾದ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ದಕ್ಷಿಣ ಮಧ್ಯ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ ಎಂದು ಬಿಜೆಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಸ್ವಾತಂತ್ರ್ಯ ಬಂದ 75 ವರ್ಷಗಳ ನಂತರ ಕಾಶ್ಮೀರದ ಹಳ್ಳಿಗಳಿಗೆ ವಿದ್ಯುತ್