ನವದೆಹಲಿ: ದೇಶದಲ್ಲಿ ಕೊರೊನಾ ಲಸಿಕೆಯ ಕೊರತೆ ಉಂಟಾಗಿದ್ದು, ಹಲವೆಡೆ ಅಗತ್ಯಕ್ಕಿಂತಲೂ ಕಡಿಮೆ ಲಸಿಕೆ ಪೂರೈಕೆಯಾಗಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಗಳಿಗೆ ಲಸಿಕೆ ವ್ಯರ್ಥವಾಗುವುದನ್ನು ತಡೆಗಟ್ಟುವಂತೆ ಸಲಹೆ ನೀಡಿದ್ದಾರೆ.
ಲಸಿಕೆ ವ್ಯರ್ಥವಾಗುವ ಸಮಸ್ಯೆ ಕುರಿತು ಮಾಹಿತಿ ಇದೆ. ಒಂದು ಡೋಸ್ ವ್ಯರ್ಥ ಮಾಡುವುದರಿಂದ ಒಂದು ಜೀವ ರಕ್ಷಿಸಲು ಸಾಧ್ಯವಾಗುವುದಿಲ್ಲ. ಲಸಿಕೆ ವ್ಯರ್ಥವಾಗುವುದನ್ನು ನಿಲ್ಲಿಸುವುದು ಮುಖ್ಯ. ಆರೋಗ್ಯ ಸಚಿವಾಲಯವು 15 ದಿನಗಳವರೆಗೆ ಲಸಿಕೆಗಳ ಬಗ್ಗೆ ರಾಜ್ಯಗಳಿಗೆ ಮಾಹಿತಿ ನೀಡುತ್ತಿದೆ ಎಂದಿದ್ದಾರೆ.
ಕೋವಿಡ್ ಪರಿಸ್ಥಿತಿ ಸಂಬಂಧಿಸಿದ್ದಂತೆ 10 ರಾಜ್ಯದ ಜಿಲ್ಲಾಧಿಕಾರಿಗಳ ಹಾಗೂ ಅಧಿಕಾರಿಗಳ ಜೊತೆ ವರ್ಚುಯಲ್ ಸಂವಹನ ನಡೆಸಿದ ಪ್ರಧಾನಿ ಮೋದಿ, ಆರೋಗ್ಯ ಸಚಿವಾಲಯವು 15 ದಿನಗಳವರೆಗೆ ಲಸಿಕೆಗಳ ಬಗ್ಗೆ ರಾಜ್ಯಗಳಿಗೆ ಮಾಹಿತಿಯನ್ನು ಒದಗಿಸುತ್ತಿದೆ ಎಂದು ತಿಳಿಸಿದ್ದು, ಇದು ಲಸಿಕೆ ಅಭಿಯಾನದಲ್ಲಿ ಅಧಿಕಾರಿಗಳಿಗೆ ನಿರ್ವಹಣೆಗೆ ಸಹಾಯ ಮಾಡುತ್ತದೆ ಎಂದಿದ್ದಾರೆ.
ಇದಕ್ಕೂ ಮೊದಲು ಲಸಿಕೆ ವ್ಯರ್ಥವಾಗುವುದನ್ನು ಕೇರಳ ಸರ್ಕಾರ ಸಮರ್ಪಕವಾಗಿ ತಡೆಗಟ್ಟಿದಕ್ಕೆ ಪ್ರಧಾನಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಅಲ್ಲದೇ ಕೋವಿಡ್ ವಿರುದ್ಧದ ಹೋರಾಟದಲ್ಲಿ ಇದು ಇನ್ನಷ್ಟು ಬಲ ತುಂಬಲಿದೆ ಎಂದಿದ್ದರು.
ಕೊರೊನಾ ವೈರಸ್ ನಿಮ್ಮ ಕೆಲಸವನ್ನು ಹೆಚ್ಚು ಬೇಡಿಕೆಯ ಮತ್ತು ಸವಾಲಿಗೆ ಒಡ್ಡಿದೆ. ಹೊಸ ಸವಾಲುಗಳ ಮಧ್ಯೆ, ನಮಗೆ ಹೊಸ ತಂತ್ರಗಳು ಮತ್ತು ಪರಿಹಾರಗಳು ಬೇಕಾಗುತ್ತವೆ. ಸ್ಥಳೀಯ ಅನುಭವಗಳನ್ನು ಬಳಸುವುದು ಈ ಸಮಯದಲ್ಲಿ ಮುಖ್ಯವಾಗುತ್ತದೆ.
ನಿಮ್ಮ ಕ್ಷೇತ್ರದಲ್ಲಿ ನಿಮ್ಮ ಅನುಭವಗಳು ಪರಿಣಾಮಕಾರಿ ನೀತಿಗಳನ್ನು ರೂಪಿಸಲು ಸಹಾಯ ಮಾಡುತ್ತವೆ. ಕೊರೊನಾ ರೂಪಾಂತರಗೊಂಡಷ್ಟು ಬಲವಾಗುತ್ತಿದೆ. ಅದಕ್ಕೆ ತಕ್ಕಂತೆ ನಾವು ಸಹ ನಮ್ಮ ಕಾರ್ಯತಂತ್ರಗಳ ಬದಲಾಯಿಸಿಕೊಳ್ಳಬೇಕು ಎಂದಿದ್ದಾರೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ನಿರಂತರ ಬದಲಾವಣೆ ಮತ್ತು ನಾವೀನ್ಯತೆ ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ನಮ್ಮನ್ನು ಸಭೆಗೆ ಕರೆದು ಮೋದಿ ಅವಮಾನಿಸಿದ್ದಾರೆ: ಮಮತಾ ಆರೋಪ