ನವದೆಹಲಿ: ದೇಶವನ್ನು ಸೆಮಿಕಂಡಕ್ಟರ್‌ಗಳು ಮತ್ತು ಮೈಕ್ರೊಪ್ರೊಸೆಸರ್‌ಗಳ ಉತ್ಪಾದನಾ ಕೇಂದ್ರವನ್ನಾಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿನಲ್ಲಿ ಮೂರು ದಿನಗಳ ಉದ್ಯಮ ಸಮ್ಮೇಳನವಾದ ಸೆಮಿಕಾನ್ ಇಂಡಿಯಾ ಉದ್ಘಾಟಿಸಲಿದ್ದಾರೆ.
ದೇಶದ ಐಟಿ ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿರುವ ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾರತವು ಜಾಗತಿಕ ಸೆಮಿಕಂಡಕ್ಟರ್ ಹಬ್ ಆಗಲು ಮತ್ತು ದೇಶದಲ್ಲಿ ಚಿಪ್ ಡಿಸೈನ್ ಮತ್ತು ಚಿಪ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ವಿಚಾರವಾಗಿ ಚರ್ಚೆ ನಡೆಸಲಾಗುತ್ತದೆ.
ಉದ್ಯಮಗಳು, ಸಂಶೋಧನಾ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಅವಕಾಶಗಳು, ಸವಾಲುಗಳು ಮತ್ತು ನವೀನ ಪರಿಹಾರಗಳನ್ನು ಚರ್ಚಿಸಲು ಈ ಸಮ್ಮೇಳನ ಸಿದ್ಧವಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೂರು ದಿನಗಳ ಈ ಸಮ್ಮೇಳನಕ್ಕೆ 'ಭಾರತದ ಸೆಮಿಕಂಡಕ್ಟರ್ ಪರಿಸರ ವೇಗವರ್ಧನೆ' (Catalyzing India’s Semiconductor Ecosystem) ' ಎಂಬ ಘೋಷವಾಕ್ಯ ಇಟ್ಟುಕೊಳ್ಳಲಾಗಿದೆ.
ಭಾರತ ಮತ್ತು ವಿದೇಶಗಳಲ್ಲಿನ ಸೆಮಿಕಂಡಕ್ಟರ್ ಮತ್ತು ಮೈಕ್ರೊಪ್ರೊಸೆಸರ್ ಉದ್ಯಮದಲ್ಲಿ ದೊಡ್ಡ ಹೆಸರು ಮಾಡಿರುವ ಉದ್ಯಮಿಗಳ ಭಾಗವಹಿಸುವಿಕೆಯನ್ನು ಈ ಸಮ್ಮೇಳನಕ್ಕೆ ನಿರೀಕ್ಷಿಸಲಾಗಿದೆ. ಇಂಡೋ - ಯುಸ್ ವೆಂಚರ್ ಪಾರ್ಟ್‌ನರ್ಸ್‌ನ ವಿನೋದ್ ಧಾಮ್, ಮೈಕ್ರಾನ್ ಟೆಕ್ನಾಲಜಿಯ ಅಧ್ಯಕ್ಷ ಮತ್ತು ಸಿಇಒ ಸಂಜಯ್ ಮೆಹ್ರೋತ್ರಾ, ಇಂಟೆಲ್ ಫೌಂಡ್ರಿ ಸೇವೆಗಳ ಅಧ್ಯಕ್ಷ ರಣಧೀರ್ ಠಾಕೂರ್, ಇಂಟೆಲ್ ಇಂಡಿಯಾದ ಮುಖ್ಯಸ್ಥ ನಿವೃತಿ ರೈ ಕೂಡಾ ಭಾಗವಹಿಸುವ ಸಾಧ್ಯತೆ ಇದೆ.
ಕೇಂದ್ರ ಮಾಹಿತಿ ತಂತ್ರಜ್ಞಾನ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಮೂರು ದಿನಗಳ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಈ ಸಮ್ಮೇಳನ ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಸರ್ಕಾರದ ಪಾತ್ರ ಮತ್ತು ಪ್ರಯತ್ನಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಅನುಕೂಲಕರ ಬೆಳವಣಿಗೆ ವಾತಾವರಣವನ್ನು ಸೃಷ್ಟಿಸುತ್ತದೆ. ದೇಶದ ಸೆಮಿಕಂಡಕ್ಟರ್ ಮಿಷನ್ ಅನ್ನು ಸಾಧಿಸುವ ನಿಟ್ಟಿನಲ್ಲಿ ಈ ಸಮ್ಮೇಳನವು ಮೊದಲ ಹೆಜ್ಜೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿಯಿಂದ ಹಾಳಾಗಿರುವ ರಾಹುಲ್ ಗಾಂಧಿ ವರ್ಚಸ್ಸು ಮರುಸೃಷ್ಟಿಯಾಗಬಹುದು: ಪ್ರಶಾಂತ್ ಕಿಶೋರ್