ನವದೆಹಲಿ: ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ಅವರ ಸಾಧನೆಯನ್ನು ಇತರರಿಗೆ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿಶೇಷವಾಗಿ ಹುರಿದುಂಬಿಸುತ್ತಾರೆ. ಇದೀಗ ಬೆಂಗಳೂರಿನ ಯುವ ಚಿತ್ರ ಕಲಾವಿದನ ಪ್ರತಿಭೆ ಹಾಗೂ ಸಾಮಾಜಿಕ ಕಳಕಳಿಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
20ರ ವರ್ಷದ ವಿದ್ಯಾರ್ಥಿ ಸ್ಟೀವನ್ ಹ್ಯಾರಿಸ್ ಅದ್ಭುತ ಚಿತ್ರಗಾರ. ತನ್ನ ಕುಂಚದಿಂದ ಕುತೂಹಲಕಾರಿ ಚಿತ್ರಗಳನ್ನು ಬಿಡಿಸುವ ಇವರು, ರಾಜ್ಯದಲ್ಲಿ ಸಂಚಲನ ಮೂಡಿಸಿದ್ದಾರೆ. ಇತ್ತೀಚೆಗೆ ಪ್ರಧಾನಿ ಮೋದಿಯ ಭಾವಚಿತ್ರ ಬಿಡಿಸಿ, ಕಳುಹಿಸಿ ಕೊಟ್ಟಿದ್ದರು. ಇದರ ಜೊತೆಗೆ ತನ್ನ ಸಾಮಾಜಿಕ ಬದ್ಧತೆ ಹಾಗೂ ಕಳಕಳಿ ಕುರಿತ ಪತ್ರವೊಂದನ್ನೂ ಬರೆದಿದ್ದರು. ಸ್ವೀವನ್ ಹ್ಯಾರಿಸ್ ಚಿತ್ರಗಳನ್ನು ಗಮನಿಸಿದ ಮೋದಿ, ಪ್ರತಿಭೆ, ಶ್ರದ್ಧೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯುವಕ ಹ್ಯಾರಿಸ್‌ಗೆ ಪ್ರಧಾನಿ ಮೋದಿ ಪತ್ರ ಬರೆದು, ಕಲಾವಿದನ ಪ್ರತಿಭೆಯನ್ನು ಹೊಗಳಿದ್ದಾರೆ. ನಿಮ್ಮ ಚಿತ್ರಗಳು ಪ್ರತಿಭೆ ಹಾಗೂ ಆಳವಾದ ಅನುಭವವನ್ನು ಬಿಂಬಿಸುತ್ತಿವೆ. ಸೃಜನಶೀಲ ಕ್ಷೇತ್ರಗಳಲ್ಲಿ ಯುವಜನರ ಆಸಕ್ತಿ ಹಾಗೂ ಶ್ರದ್ಧೆಯನ್ನು ನೋಡುವುದಕ್ಕೆ ಸಂತಸವಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಒಲಿಂಪಿಕ್ಸ್ ತಾರೆಗಳೊಂದಿಗೆ ಉಪಹಾರದ ಸ್ಮರಣೀಯ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಕಳೆದ 15 ವರ್ಷದಿಂದ ಚಿತ್ರಕಲೆಯಲ್ಲಿ ತೊಡಗಿದ್ದು, 100 ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುವುದಾಗಿ ಸ್ಟೀವನ್ ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಇದ್ರ ಜೊತೆಗೆ, ಮೋದಿ ತನಗೆ ಸ್ಫೂರ್ತಿಯಾಗಿದ್ದು, ದೇಶವ್ಯಾಪಿ ಕೈಗೊಂಡಿರುವ ಕೋವಿಡ್ ವ್ಯಾಕ್ಸಿನೇಷನ್ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.