ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ಗೆ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, 21 ನೇ ಶತಮಾನದಲ್ಲಿ ಭಾರತವು ಮುಂದುವರೆಯಲು ಇಂದು ಅತ್ಯಂತ ಮಹತ್ವದ ದಿನ. ಕಳೆದ 7 ವರ್ಷಗಳ ಹಿಂದೆ ಆರಂಭಿಸಿದ ಆರೋಗ್ಯ ಅಭಿಯಾನಕ್ಕೆ ಇಂದು ಹೊಸ ಟಚ್ ಸಿಕ್ಕಿದೆ. ಭಾರತ್ ಡಿಜಿಟಲ್ ಮಿಷನ್ ಇಂದಿನಿಂದ ಕಾರ್ಯಾರಂಭವಾಗುತ್ತಿದೆ. ಇದು ಭಾರತೀಯರ ಆರೋಗ್ಯ ರಕ್ಷಣೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂದರು.
ಇಂದಿನಿಂದ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಶುರು: ಮೋದಿ ಸಂತಸ
ಈ ಯೋಜನೆ ಬಡ ಮತ್ತು ಮಧ್ಯಮ ವರ್ಗದವರಿಗೆ ಅನುಕೂಲವಾಗಲಿದೆ. ಬಡವರು ಚಿಕಿತ್ಸೆ ಸಂದರ್ಭದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ತೊಡೆದು ಹಾಕುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. 3 ವರ್ಷಗಳ ಹಿಂದೆ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಆಯುಷ್ಮಾನ್ ಯೋಜನೆಯನ್ನ ಆರಂಭಿಸಲಾಯಿತು. ಇಂದಿನಿಂದ ದೇಶಾದ್ಯಂತ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಶುರುವಾಗುತ್ತಿದ್ದು, ನನಗೆ ಸಂತೋಷವಾಗಿದೆ ಎಂದರು.
ಕಳೆದ ಮೂರು ವರ್ಷಗಳಲ್ಲಿ ಆಯುಷ್ಮಾನ್ ಯೋಜನೆ ದೇಶದ ಸಾವಿರಾರು ಬಡ ಕುಟುಂಬಗಳಿಗೆ ನೆರವಾಗಿದೆ. ಇದೀಗ ಇಂತಹ ಕುಟುಂಬಗಳ ರಕ್ಷಣೆಗೆ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಆರಂಭವಾಗಿದೆ. ಇದರಡಿ ಡಿಜಿಟಲ್ ಆರೋಗ್ಯ ಐಡಿ(ಗುರುತಿನ ಚೀಟಿ) ಯನ್ನು ನೀಡಲಾಗುತ್ತದೆ. ಪ್ರತಿಯೊಬ್ಬ ನಾಗರಿಕನ ಆರೋಗ್ಯ ದಾಖಲೆಯನ್ನು ಡಿಜಿಟಲ್ ಮೂಲಕ ರಕ್ಷಿಸಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ದೇಶದಲ್ಲಿ ಇಳಿಕೆ ಕಂಡ ಕೋವಿಡ್.. ಹೊಸ ಪ್ರಕರಣಗಳ ಪೈಕಿ ಕೇರಳದಲ್ಲೇ ಅಧಿಕ
ಆರೋಗ್ಯ ಸೇತು ಆ್ಯಪ್ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಸಾಕಷ್ಟು ಸಹಾಯ ಮಾಡಿದೆ. ಉಚಿತ ಲಸಿಕೆ ಅಭಿಯಾನದ ಅಡಿ ಭಾರತವು ಇಂದು ಸುಮಾರು 90 ಕೋಟಿ ಡೋಸ್ ವ್ಯಾಕ್ಸಿನೇಷನ್ ಪೂರೈಸಿದೆ. ಇದರ ಹಿಂದೆ ಕೋ-ವಿನ್ ಆ್ಯಪ್ನ ಪಾತ್ರ ದೊಡ್ಡದಿದೆ ಎಂದರು.