ಹೈದರಾಬಾದ್: ತೆಲಂಗಾಣದ ಸಿಕಂದರಾಬಾದ್‌ನಿಂದ ಆಂಧ್ರಪ್ರದೇಶದ ವಿಶಾಖಪಟ್ಟಣಂ ಅನ್ನು ಸಂಪರ್ಕಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾನುವಾರ ಚಾಲನೆ ನೀಡಿದ್ದಾರೆ. 700 ಕಿಮೀ ಅಂತರದ ಈ ರೈಲು ಎರಡು ತೆಲುಗು ಭಾಷಿಕ ರಾಷ್ಟ್ರಗಳನ್ನು ಬೆಸೆಯಲಿದೆ. ಇದು ದೇಶದ ಒಟ್ಟಾರೆ 8ನೇ ವಂದೇ ಭಾರತ್ ರೈಲಾಗಿದೆ.
ರೈಲಿಗೆ ಚಾಲನೆ ನೀಡಿ ಮಾತನಾಡಿದ ಮೋದಿ, 'ಸಿಕಂದರಾಬಾದ್ ಮತ್ತು ವಿಶಾಖಪಟ್ಟಣಂ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ ಆರಂಭವಾಗಿದ್ದು, ನನಗೆ ಸಂತೋಷವಾಗಿದೆ. ಇದು ಜನರ ಸಂಚಾರ ಸೌಕರ್ಯ, ಪ್ರವಾಸೋದ್ಯಮ ಮತ್ತು ಆರ್ಥಿಕತೆಗೆ ಉತ್ತೇಜನ ನೀಡಲಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದ ಜನರಿಗೆ ನೀಡಿದ ಉಡುಗೊರೆಯಾಗಿ ಭಾವಿಸುವೆ' ಎಂದು ಹೇಳಿದರು.
ಜನರಿಗೆ ಲಾಭವೇನು?: 'ಉಭಯ ನಗರಗಳ ನಡುವೆ ಇರುವ ಅಂತರವನ್ನು ಈ ರೈಲು 700 ಕಿ.ಮೀ ತಗ್ಗಿಸಿದೆ. ಪ್ರಯಾಣದ ಸಮಯವನ್ನು ಕಡಿತಗೊಳಿಸುವುದರ ಜೊತೆಗೆ ಪ್ರವಾಸೋದ್ಯಮಕ್ಕೂ ಪುಷ್ಠಿ ನೀಡಲಿದೆ. ಈ ಎಕ್ಸ್‌ಪ್ರೆಸ್ ರೈಲು ತೆಲಂಗಾಣ ಮತ್ತು ಆಂಧ್ರಪ್ರದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುತ್ತದೆ. ವಂದೇ ಭಾರತ್ ಎಕ್ಸ್ಪ್ರೆಸ್ನಿಂದಾಗಿ ದೇಶದ ಎಲ್ಲದರಲ್ಲೂ ಉತ್ತಮವಾದುದು ಎಂದು ಸೂಚಿಸುತ್ತದೆ. ಈ ಎಕ್ಸ್‌ಪ್ರೆಸ್ ಹೊಸ ಸಂಕಲ್ಪ ಮತ್ತು ಸಾಮರ್ಥ್ಯದ ಸಂಕೇತವಾಗಿದೆ' ಎಂದು ಪ್ರಧಾನಿ ಬಣ್ಣಿಸಿದರು. ರೈಲು ಚಾಲನೆಗೆ ಪ್ರಧಾನಿ ಮೋದಿ ಅವರ ಪ್ರತಿನಿಧಿಯಾಗಿ ಕೇಂದ್ರ ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ ಅವರು ಸಿಕಂದರಾಬಾದ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 10 ರಲ್ಲಿ ಭೌತಿಕವಾಗಿ ಉಪಸ್ಥಿತರಿದ್ದು, ಚಾಲನೆಗೆ ಅನುಮೋದಿಸಿದರು.
ಎಲ್ಲೆಲ್ಲಿ ನಿಲುಗಡೆ?: ರೈಲ್ವೇ ಇಲಾಖೆಯ ಪ್ರಕಾರ, ಸಿಕಂದರಾಬಾದ್ ವಿಶಾಖಪಟ್ಟಣವನ್ನು ಸಂಪರ್ಕಿಸುವ ಎಕ್ಸ್‌ಪ್ರೆಸ್, ತೆಲುಗು ಮಾತನಾಡುವ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರಪ್ರದೇಶದ ಮೊದಲ ರೈಲಾಗಿದೆ. ಸುಮಾರು 700 ಕಿ.ಮೀ. ಅಂತರ ಸಾಗುವ ಇದು ಆಂಧ್ರಪ್ರದೇಶದ ವಿಶಾಖಪಟ್ಟಣಂ, ರಾಜಮಂಡ್ರಿ ಮತ್ತು ವಿಜಯವಾಡ ಮತ್ತು ತೆಲಂಗಾಣದ ಖಮ್ಮಂ, ವಾರಂಗಲ್ ಮತ್ತು ಸಿಕಂದರಾಬಾದ್ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿದೆ.
ಆರಂಭಕ್ಕೂ ಮುನ್ನ ವಿಘ್ನ: ಭಾರತೀಯ ರೈಲ್ವೇ ಪರಿಚಯಿಸಿದ ದೇಶದ ಎಂಟನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇದಾಗಿದ್ದು, ಸಂಚಾರ ಆರಂಭಕ್ಕೂ ಮುನ್ನವೇ ಇದರ ಮೇಲೆ ಕಲ್ಲಿನ ದಾಳಿ ನಡೆದಿತ್ತು. 4 ದಿನಗಳ ಹಿಂದೆ ಅಂದರೆ ಜನವರಿ 11 ರಂದು ವಿಶಾಖಪಟ್ಟಣಂನ ಕಂಚರಪಾಲೆಂ ಬಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ಬೋಗಿಯೊಂದರ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದರು. ಇದರಿಂದ ಕಿಟಿಕಿಯ ಗಾಜು ಜಖಂಗೊಂಡಿತ್ತು. ರೈಲಿನ ನಿರ್ವಹಣೆ ಮತ್ತು ಪ್ರಾಯೋಗಿಕ ಚಾಲನೆ ನಡೆಸುತ್ತಿದ್ದ ವೇಳೆ ದುಷ್ಕರ್ಮಿಗಳು ಕಲ್ಲು ತೂರಿದ್ದರು.
ರೈಲಿನ ಮೇಲೆ ಕಲ್ಲು ತೂರಾಟ: ವಿಶಾಖಪಟ್ಟಣದಲ್ಲಿ ವಂದೇ ಭಾರತ್ ರೈಲಿನ ಮೇಲೆ ನಡೆದ ಕಲ್ಲು ತೂರಾಟಕ್ಕೂ ಮೊದಲು ಪಶ್ಚಿಮಬಂಗಾಳದ ಎಕ್ಸ್‌ಪ್ರೆಸ್ ಮೇಲೂ 2 ಬಾರಿ ದಾಳಿ ನಡೆದಿತ್ತು. ಹೌರಾದಿಂದ ಜಲ್ಪೈಗುರಿಗೆ ಬರುತ್ತಿದ್ದಾಗ, ಜಲ್ಪೈಗುರಿಯಿಂದ ಹೌರಾಗೆ ಬರುತ್ತಿದ್ದಾಗ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು.
ಕಲ್ಲು ತೂರಾಟದ ಪರಿಣಾಮ ವಂದೇ ಭಾರತ್ ಎಕ್ಸ್‌ಪ್ರೆಸ್ ಕಿಟಕಿ ಗಾಜುಗಳು ಒಡೆದಿದ್ದವು. ಘಟನೆಯಲ್ಲಿ ರೈಲಿನಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದರು ಎಂದು ರೈಲ್ವೆ ಇಲಾಖೆ ತಿಳಿಸಿತ್ತು. ಇದು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿ, ನಮ್ಮ ರಾಜ್ಯದಲ್ಲಿ ಯಾವುದೇ ದಾಳಿ ನಡೆದಿಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದರು.
ರೈಲಿನ ವಿಶೇಷತೆ: ಇನ್ನು, ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಪ್ರಯಾಣಿಕ ರೈಲಾಗಿದೆ. ಇದು ರೈಲು ಬಳಕೆದಾರರಿಗೆ ವೇಗ, ಆರಾಮದಾಯಕ ಮತ್ತು ಹೆಚ್ಚು ಅನುಕೂಲಕರ ಪ್ರಯಾಣದ ಅನುಭವವನ್ನು ನೀಡುತ್ತದೆ ಎಂದು ರೈಲ್ವೆ ಇಲಾಖೆ ಹೇಳಿದೆ.
ಇದನ್ನೂ ಓದಿ: ವಿಶಾಖಪಟ್ಟಣಂನಲ್ಲೂ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ: ಲಕ್ಷ ಲಕ್ಷ ಮೌಲ್ಯದ ಕಿಟಕಿಗಳಿಗೆ ಹಾನಿ!