ಮಧುರೈ(ತಮಿಳುನಾಡು) : ಸೌರಾಷ್ಟ್ರದ ಜನರನ್ನು ಮಧುರೈ ಸ್ವೀಕರಿಸುವ ರೀತಿ 'ಏಕ್ ಭಾರತ್, ಶ್ರೇಷ್ಠ ಭಾರತ್' ಎಂಬುದಕ್ಕೆ ಒಂದು ಉತ್ತಮ ಉದಾಹರಣೆ ಎಂದು ಪ್ರಧಾನಿ ಮೋದಿ ಶುಕ್ರವಾರ ಹೇಳಿದ್ದಾರೆ.
ತಮಿಳುನಾಡಿನ ಮಧುರೈನಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಈ ಪ್ರದೇಶದ ಜನರು ದೃಢ ಮನಸ್ಸು ಮತ್ತು ದೊಡ್ಡ ಹೃದಯ ಹೊಂದಿದ್ದಾರೆ. ವರ್ಷಗಳ ಹಿಂದೆ ನನ್ನ ತವರು ರಾಜ್ಯ ಗುಜರಾತ್‌ನ ಸೌರಾಷ್ಟ್ರದ ಜನ ಇಲ್ಲಿಗೆ ಬಂದರು. ಮಧುರೈ ಅವರನ್ನು ಒಪ್ಪಿಕೊಂಡ ರೀತಿ ಏಕ್ ಭಾರತ್, ಶ್ರೇಷ್ಠ ಭಾರತ್ಗೆ ಒಂದು ಉತ್ತಮ ಉದಾಹರಣೆ ಎಂದು ಮೋದಿ ತಿಳಿಸಿದ್ದಾರೆ.
ತಮಿಳುನಾಡಿನ ಜಲ್ ಜೀವನ್ ಮಿಷನ್ ಅನುಷ್ಠಾನದ ಕುರಿತು ಮಾತನಾಡುತ್ತಾ, ಈ ಭೂಮಿ ಭಗವಾನ್ ಸುಂದರೇಶ್ವರರಿಂದ ಆಶೀರ್ವದಿಸಲ್ಪಟ್ಟಿದೆ. ಭಾರತದಲ್ಲಿ ಟ್ಯಾಪ್ ವಾಟರ್ ಸಂಪರ್ಕಕ್ಕಾಗಿ ಜಲ ಜೀವನ್ ಮಿಷನ್ ಇದೆ. ಇಲ್ಲಿ ಪ್ರಾರಂಭವಾದಾಗಿನಿಂದ 60 ಲಕ್ಷಕ್ಕೂ ಹೆಚ್ಚು ನೀರಿನ ಸಂಪರ್ಕಗಳನ್ನು ಒದಗಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಕಾರಿನಲ್ಲಿ ಇವಿಎಂ ಪತ್ತೆ.. ನಾಲ್ವರು ಅಧಿಕಾರಿಗಳು ಸಸ್ಪೆಂಡ್ - ವಿಡಿಯೋ
2016ರ ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಜಲ್ಲಿಕಟ್ಟು ನಿಷೇಧಕ್ಕೆ ಕರೆ ಬಂದಿತ್ತು. ಕಾಂಗ್ರೆಸ್ ಮತ್ತು ಡಿಎಂಕೆ ತಮ್ಮ ಬಗ್ಗೆ ನಾಚಿಕೆ ಪಡಬೇಕು. ಜಲ್ಲಿಕಟ್ಟನ್ನು ಮುಂದುವರೆಸುವ ಕುರಿತು ಎಐಎಡಿಎಂಕೆ ನೇತೃತ್ವದ ರಾಜ್ಯ ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆಗೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಇದಾದ ಬಳಿಕವೇ ಜಲ್ಲಿಕಟ್ಟು ಯಾವುದೇ ಅಡೆತಡೆಯಿಲ್ಲದೇ ಮುಂದುವರೆಯಿತು ಎಂದಿದ್ದಾರೆ.
ತಮಿಳು ಸಂಸ್ಕೃತಿಯನ್ನು ನಾಶ ಮಾಡಲು ಬಯಸಿದ ಕಾಂಗ್ರೆಸ್ ಜೊತೆ ಡಿಎಂಕೆ ಮೈತ್ರಿ ಮಾಡಿಕೊಂಡಿರುವುದು ಖಂಡನೀಯ. ಕಾಂಗ್ರೆಸ್ ಮತ್ತು ಡಿಎಂಕೆ ನಡುವಿನ ಮೈತ್ರಿ ತಮಿಳುನಾಡಿನ ಸುರಕ್ಷತೆ ಮತ್ತು ಘನತೆಗೆ ಮಾರಕ. ಡಿಎಂಕೆ ಶಾಂತಿಪ್ರಿಯ ಮಧುರೈಯನ್ನು ಮಾಫಿಯಾ ತಾಣವನ್ನಾಗಿ ಪರಿವರ್ತಿಸಲು ತವಕಿಸುತ್ತಿದೆ ಎಂದು ಆರೋಪಿಸಿದ್ದಾರೆ.