ಪುಣೆ: ಕೋವಿಡ್ -19 ಲಸಿಕೆಯ ಅಭಿವೃದ್ಧಿಯ ಬಗ್ಗೆ ಮಾಹಿತಿ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 28 ರಂದು ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ)ಗೆ ಭೇಟಿ ನೀಡುವ ನಿರೀಕ್ಷೆಯಿದೆ.
ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕಡೆಯಿಂದ ' ಕೋವಿಶೀಲ್ಡ್' ಹೆಸರಿನ ಲಸಿಕೆಯ ಅಭಿವೃದ್ಧಿಪಡಿಸಲಾಗಿದೆ ಇದು ಎಸ್‌ಐಐ ನಲ್ಲಿ ಅಂತಿಮ ಪರೀಕ್ಷಾ ಹಂತದಲ್ಲಿದೆ. ಹೀಗಾಗಿ ಈ ಕುರಿತು ಮಾಹಿತಿ ಪಡೆಯಲು ಪ್ರಧಾನಿ ಆಗಮಿಸುತ್ತಿದ್ದು, ಮೋದಿಯವರ ಜೊತೆ ವಿದೇಶಿ ರಾಯಭಾರಿಗಳು ಸಹ ಆಗಮಿಸಲಿದ್ದಾರೆ. ಇದಕ್ಕಾಗಿ ಈಗಾಗಲೇ ಸಿದ್ಧತೆಗಳು ಪ್ರಾರಂಭವಾಗಿವೆ. ಈ ಸಂಬಂಧ ಗುರುವಾರ ವಿಭಾಗೀಯ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಲಾಯಿತು.
ಈ ಕುರಿತು ಪುಣೆಯ ವಿಭಾಗೀಯ ಆಯುಕ್ತ ಸೌರಭ್ ರಾವ್ ಪ್ರತಿಕ್ರಿಯಿಸಿದ್ದು, "ಪುಣೆಗೆ ಪ್ರಧಾನ ಮಂತ್ರಿಯ ಭೇಟಿಯ ಕುರಿತು ನಮಗೆ ಇನ್ನೂ ಅಧಿಕೃತ ದೃಢೀಕರಣ ಸಿಕ್ಕಿಲ್ಲ. ಆದರೆ ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರಧಾನಮಂತ್ರಿ ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಗೆ ಭೇಟಿ ನೀಡುವ ನಿರೀಕ್ಷೆಯಿದೆ. ಇದಕ್ಕೂ ಮುನ್ನ ವಿಶ್ವದ 100 ರಾಯಭಾರಿಗಳು ಲಸಿಕೆಯ ಉತ್ಪಾದನಾ ಸಾಮರ್ಥ್ಯವನ್ನು ಪರೀಕ್ಷಿಸಲು ನವೆಂಬರ್ 27 ರಂದು ಪುಣೆಗೆ ಭೇಟಿ ನೀಡುವ ನಿರೀಕ್ಷೆಯಿತ್ತು. ಆದರೆ ಇದನ್ನು ಮುಂದೂಡಲಾಗಿದ್ದು, ಮತ್ತು ಡಿಸೆಂಬರ್ 4 ಅಥವಾ 5 ರಂದು ಮತ್ತೆ ವಿದೇಶಿ ರಾಯಭಾರಿಗಳು ಬರುವ ನಿರೀಕ್ಷೆಯಿದೆ'' ಎಂದು ತಿಳಿಸಿದ್ದಾರೆ.
ದೇಶದಲ್ಲಿ ಕೊರೊನಾ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳ ವೆಚ್ಚವನ್ನು ಸರ್ಕಾರಿ ಸಂಸ್ಥೆಯಾದ ಐಸಿಎಂಆರ್ ಭರಿಸುತ್ತಿದೆ. ಕೋವಿಶೀಲ್ಡ್ ಲಸಿಕೆಯ ಇತರ ವೆಚ್ಚಗಳನ್ನು ಸೀರಮ್ ಸಂಸ್ಥೆ ಭರಿಸುತ್ತಿದೆ.
2021 ರ ಆರಂಭದಲ್ಲಿ ಲಭ್ಯವಾಗಲಿರುವ ಆಕ್ಸ್‌ಫರ್ಡ್ ಅಸ್ಟ್ರಾಜೆನೆಕಾದ ಕೋವಿಶೀಲ್ಡ್ ಲಸಿಕೆ ಆರೋಗ್ಯ ಕಾರ್ಯಕರ್ತರು ಮತ್ತು ಹಿರಿಯ ನಾಗರಿಕರಿಗೆ ಫೆಬ್ರವರಿ 2021 ರಲ್ಲಿ ಮೊದಲ ಬಾರಿಗೆ ಲಭ್ಯವಾಗಲಿದೆ. ನಂತರ ಲಸಿಕೆ ಏಪ್ರಿಲ್‌ನಲ್ಲಿ ಸಾರ್ವಜನಿಕರಿಗೆ ಲಭ್ಯವಿರುತ್ತದೆ. ಮತ್ತು 2024 ರ ವೇಳೆಗೆ ಕೊರೊನಾ ಲಸಿಕೆ ದೇಶದ ಎಲ್ಲರಿಗೂ ಲಭ್ಯವಾಗಲಿದೆ ಎಂದು ತಿಳಿದು ಬಂದಿದೆ.
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಮತ್ತು ಐಸಿಎಂಆರ್ ದೇಶಾದ್ಯಂತ 15 ವಿವಿಧ ಕೇಂದ್ರಗಳಲ್ಲಿ ಮೂರನೇ ಹಂತದ ಲಸಿಕೆ ಪರೀಕ್ಷಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಇದಕ್ಕಾಗಿ ಸುಮಾರು 1,600 ಸ್ವಯಂಸೇವಕರು ಪ್ರಯೋಗಕ್ಕೆ ಒಳಪಡಲು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ.