ಚಾಪ್ರಾ (ಬಿಹಾರ): ಪ್ರೇಮಿಗಳು ಪರಸ್ಪರ ಭೇಟಿಯಾಗಲು ಹಲವು ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಹಾಗೋ ಹೀಗೋ ಮಾಡಿ ಗೌಪ್ಯ ಸ್ಥಳದಲ್ಲಿ ಭೇಟಿ ಆಗ್ತಾರೆ. ಆದ್ರೆ ತಮ್ಮನ್ನು ಯಾರಾದರು ನೋಡಿ ಮನೆಯಲ್ಲಿ ಹೇಳಿದರೆ ಕಷ್ಟ ಕಷ್ಟ ಎಂಬ ಭಯ ಅವರನ್ನು ಕಾಡುತ್ತಲೇ ಇರುತ್ತೆ. ಬಿಹಾರದಲ್ಲೂ ಇಂತಹದ್ದೇ ಒಂದು ಪ್ರಸಂಗ ಬೆಳಕಿಗೆ ಬಂದಿದೆ. ಬಾವಿಗೆ ಬಿದ್ದು ಯುವಕ ಇಕ್ಕಟ್ಟಿಗೆ ಸಿಲುಕಿದರೂ ಕೊನೆಗೆ ಖುಷಿಯಾಗಿದ್ದಾನೆ. ಅದು ಹೇಗೆ ಅನ್ನೋದನ್ನು ತಿಳಿಯೋಣ..
ಹೌದು, ಪ್ರೀತಿಸಿದ ಹುಡುಗಿಯ ಮನೆಗೆ ಮಧ್ಯರಾತ್ರಿ 2 ಗಂಟೆಗೆ ಬಂದ ಪ್ರೇಮಿಯೊಬ್ಬ ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಯುವಕನು ಯುವತಿಯ ಮನೆಗೆ ಬಂದಾಗ ಆಕೆಯ ಕುಟುಂಬಸ್ಥರು ಎಚ್ಚರಗೊಂಡಿದ್ದಾರೆ. ಆಗ ಅವರಿಂದ ತಪ್ಪಿಸಿಕೊಳ್ಳಲು ಯುವಕ ಓಟಕಿತ್ತಿದ್ದಾನೆ. ಈ ವೇಳೆ ಆಳವಾದ ಬಾವಿಗೆ ಹಾರಿದ್ದಾನೆ. ಬಳಿಕ ಗ್ರಾಮಸ್ಥರು ಯುವಕನನ್ನು ಹಗ್ಗದ ಸಹಾಯದಿಂದ ಮೇಲೆತ್ತಿದ್ದಾರೆ. ಛಾಪ್ರಾದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ.
ಗೌಪ್ಯವಾಗಿ ಬಂದು ಇಕ್ಕಟ್ಟಿಗೆ ಸಿಲುಕಿದ ಲವರ್.. ಮುನ್ನಾ ರಾಜ್ ಪೇಚಿಗೆ ಸಿಲುಕಿರುವ ವ್ಯಕ್ತಿ. ಮೋತಿರಾಜ್ಪುರ ನಿವಾಸಿಯಾದ ಈತ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದಾನೆ. ಶನಿವಾರ ಮಧ್ಯರಾತ್ರಿ 2 ಗಂಟೆಯ ವೇಳೆ ಆಕೆಯ ಮನೆಗೆ ಗೌಪ್ಯವಾಗಿ ಬಂದಿದ್ದಾನೆ. ಈ ವೇಳೆ ಸದ್ದು ಕೇಳಿ ಎಚ್ಚರವಾದ ಹುಡುಗಿಯ ಮನೆಯವರು ಮುನ್ನಾರಾಜ್ನನ್ನು ಹಿಡಿಯಲು ಮುಂದಾಗಿದ್ದಾರೆ.
ಈ ವೇಳೆ ಅವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಯುವಕ ಮನೆಯ ಪಕ್ಕದಲ್ಲೇ ಇದ್ದ ಆಳವಾದ ಬಾವಿಗೆ ಹಾರಿದ್ದಾನೆ. ಬಾವಿಯ ಸುತ್ತಲೂ ನೆರೆದ ಕುಟುಂಬಸ್ಥರು ನಿಂದಿಸಿದ್ದಾರೆ. ಬಳಿಕ ಜನರನ್ನು ಒಗ್ಗೂಡಿಸಿ ಹಗ್ಗದ ಸಹಾಯದಿಂದ ಆತನನ್ನೇನೋ ಬಾವಿಯಿಂದ ಮೇಲೆತ್ತಿ ಹೊರತಂದಿದ್ದಾರೆ.
ಪ್ರಕರಣ ಸುಖಾಂತ್ಯ.. ಯುವಕನ ಕಿತಾಪತಿಗೆ ಆಕ್ರೋಶಗೊಂಡ ಕುಟುಂಬಸ್ಥರು ಪಂಚಾಯಿತಿ ನಡೆಸಿದ್ದಾರೆ. ಹುಡುಗಿಯ ಜೊತೆಗೆ ಯುವಕ ಪ್ರೇಮಸಂಬಂಧ ಹೊಂದಿದ್ದು ದೃಢವಾದ ಕಾರಣ ಇಬ್ಬರಿಗೆ ಊರಿನ ದೇವಸ್ಥಾನದಲ್ಲಿ ಮದುವೆ ಮಾಡಿಸಿದ್ದಾರೆ.
ಓದಿ: ಫ್ಯಾನ್ಸಿ ಹೇರ್ ಕಟಿಂಗ್ ಮಾಡಿಸಿದ್ದಕ್ಕೆ ಬೈದ ಅಪ್ಪ: ನೇಣು ಬಿಗಿದುಕೊಂಡ 8ನೇ ತರಗತಿ ಮಗ!