ನವದೆಹಲಿ: 2002ರ ಗುಜರಾತ್ ಗಲಭೆ ಕುರಿತು ಬಿಬಿಸಿ ತಯಾರಿಸಿರುವ ಸಾಕ್ಷ್ಯಚಿತ್ರವನ್ನು ನಿರ್ಬಂಧಿಸುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸೋಮವಾರ ಒಪ್ಪಿಕೊಂಡಿದೆ. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠವು ವಕೀಲ ಎಂ ಎಲ್ ಶರ್ಮಾ ಮತ್ತು ಹಿರಿಯ ವಕೀಲ ಸಿ ಯು ಸಿಂಗ್ ಅವರು ಈ ವಿಷಯದ ಕುರಿತು ತಮ್ಮ ಪ್ರತ್ಯೇಕ ಪಿಐಎಲ್‌ಗಳನ್ನು ತುರ್ತು ಪಟ್ಟಿ ಮಾಡುವಂತೆ ಕೋರಿ ಸಲ್ಲಿಸಿದ ಅರ್ಜಿಗಳನ್ನು ಗಣನೆಗೆ ತೆಗೆದುಕೊಂಡಿತು. ಫೆಬ್ರವರಿ 6 ರಂದು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ.
ವಿಚಾರಣೆಯ ಆರಂಭದಲ್ಲಿ, ವೈಯಕ್ತಿಕವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ವಕೀಲ ಶರ್ಮಾ ತಮ್ಮ ಮನವಿಯನ್ನು ಪ್ರಸ್ತಾಪಿಸಿ, ಜನರನ್ನು ಬಂಧಿಸಲಾಗುತ್ತಿದೆ ಎಂದು ಹೇಳಿದರು. ಇದನ್ನು ಸೋಮವಾರ ಪಟ್ಟಿ ಮಾಡಲಾಗುವುದು ಎಂದು ಸಿಜೆಐ ತಿಳಿಸಿದರು. ಹಿರಿಯ ಪತ್ರಕರ್ತ ಎನ್ ರಾಮ್ ಮತ್ತು ಹೋರಾಟಗಾರ ವಕೀಲ ಪ್ರಶಾಂತ್ ಭೂಷಣ್ ಅವರು ಸಲ್ಲಿಸಿದ ಪ್ರತ್ಯೇಕ ಅರ್ಜಿಗಳ ಬಗ್ಗೆ ಹಿರಿಯ ವಕೀಲ ಸಿ ಯು ಸಿಂಗ್ ಪ್ರಸ್ತಾಪಿಸಿದರು.
ಟ್ವೀಟ್ ಡಿಲೀಟ್ ಮಾಡಿರುವ ಬಗ್ಗೆ ಪ್ರಸ್ತಾಪ: ತುರ್ತು ಅಧಿಕಾರವನ್ನು ಬಳಸಿಕೊಂಡು ರಾಮ್ ಮತ್ತು ಭೂಷಣ್ ಮಾಡಿದ ಟ್ವೀಟ್‌ಗಳನ್ನು ಡಿಲೀಟ್ ಮಾಡಿರುವ ಬಗ್ಗೆ ವಕೀಲ ಸಿ ಯು ಸಿಂಗ್ ಉಲ್ಲೇಖಿಸಿದರು. ಬಿಬಿಸಿ ಸಾಕ್ಷ್ಯಚಿತ್ರ ಸ್ಟ್ರೀಮಿಂಗ್ ಮಾಡಿದ್ದಕ್ಕಾಗಿ ಅಜ್ಮೀರ್‌ನ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಹಾಕಲಾಗಿದೆ ಎಂದು ಅವರು ಹೇಳಿದರು. ಇದರ ನಂತರ ಅರ್ಜಿ ವಿಚಾರಣೆಯನ್ನು ನಾವು ಪಟ್ಟಿ ಮಾಡುತ್ತೇವೆ ಎಂದು ಸಿಜೆಐ ಹೇಳಿದರು. ಸಾಕ್ಷ್ಯಚಿತ್ರ ನಿರ್ಬಂಧಿಸುವ ಕೇಂದ್ರದ ನಿರ್ಧಾರದ ವಿರುದ್ಧ ವಕೀಲ ಶರ್ಮಾ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು.
ಬಿಬಿಸಿ ತಯಾರಿಸಿರುವ ಸಾಕ್ಷ್ಯಚಿತ್ರದ ಭಾಗ 1 ಮತ್ತು ಭಾಗ 2 ಇವುಗಳನ್ನು ಸುಪ್ರೀಂಕೋರ್ಟ್ ತರಿಸಿಕೊಂಡು ಪರಿಶೀಲಿಸಬೇಕೆಂದು ಮತ್ತು 2002ರ ಗುಜರಾತ್ ಗಲಭೆಯಲ್ಲಿ ನೇರವಾಗಿ ಹಾಗೂ ಪರೋಕ್ಷವಾಗಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ. ಜನವರಿ 21 ರಂದು ಕೇಂದ್ರವು ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ "ಇಂಡಿಯಾ: ದಿ ಮೋದಿ ಕ್ವೆಶ್ಚನ್" ಗೆ ಲಿಂಕ್‌ಗಳನ್ನು ಹಂಚಿಕೊಳ್ಳುವ ಬಹು ಯೂಟ್ಯೂಬ್ ವಿಡಿಯೋಗಳು ಮತ್ತು ಟ್ವಿಟರ್ ಪೋಸ್ಟ್‌ಗಳನ್ನು ನಿರ್ಬಂಧಿಸಲು ನಿರ್ದೇಶನ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಸಾಕ್ಷ್ಯ ಚಿತ್ರದ ಬಗ್ಗೆ ದೇಶದಲ್ಲಿ ವ್ಯಾಪಕ ಆಕ್ರೋಶ: ಬ್ರಿಟನ್ನ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) 2002 ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಪಿಎಂ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯ ಆಡಳಿತವನ್ನು ಗುರಿಯಾಗಿಸಿಕೊಂಡು ಎರಡು ಭಾಗಗಳ ವಿಡಿಯೊ ಸರಣಿಯನ್ನು ಪ್ರಸಾರ ಮಾಡಿತ್ತು. ಸಾಕ್ಷ್ಯಚಿತ್ರದ ಬಗ್ಗೆ ದೇಶದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ನಂತರ ಇದನ್ನು ಇಂಟರ್ನೆಟ್ನಿಂದ ತೆಗೆದುಹಾಕಲು ಕೇಂದ್ರ ಸರ್ಕಾರ ಆದೇಶಿಸಿತ್ತು.
ಖಂಡನಾ ನಿರ್ಣಯಕ್ಕೆ ಸಹಿ: ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರವನ್ನು ಬಲವಾದ ಖಂಡಿಸಿರುವ ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳು ಮತ್ತು ಸಶಸ್ತ್ರ ಪಡೆಗಳ ನಿವೃತ್ತರು ಸೇರಿದಂತೆ 300 ಕ್ಕೂ ಹೆಚ್ಚು ಪ್ರಸಿದ್ಧ ಭಾರತೀಯರು ಭಾರತ ಮತ್ತು ಅದರ ಪ್ರಧಾನಿಯ ಬಗ್ಗೆ ಪೂರ್ವಾಗ್ರಹ ಪೀಡಿತವಾಗಿ ವಿಡಿಯೋ ತೋರಿಸಿದ್ದಕ್ಕಾಗಿ ಬಿಬಿಸಿಯನ್ನು ದೂಷಿಸುವ ಖಂಡನಾ ನಿರ್ಣಯಕ್ಕೆ ಸಹಿ ಹಾಕಿದ್ದಾರೆ.
ಇದನ್ನೂ ಓದಿ: 'ದೇಶ ಒಡೆಯುವ ಶಕ್ತಿಗಳಿಂದ ಎಚ್ಚರದಿಂದಿರಿ': ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಪ್ರಧಾನಿ ಮೋದಿ ಪರೋಕ್ಷ ಟೀಕೆ