ಚೆನ್ನೈ (ತಮಿಳುನಾಡು): ರಾಜ್ಯದ ಜನತೆಗೆ ತೈಲ ದರದ ಹೊರೆಯನ್ನು ಕಡಿಮೆ ಮಾಡಲು ತಮಿಳುನಾಡು ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ (ಸೆಸ್) 3 ರೂಪಾಯಿ ಕಡಿತ ಮಾಡಿದ್ದು, ಇದರಿಂದ ರಾಜ್ಯದಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್ ದರ 99.49 ರೂ. ಆಗಿದೆ, ನಿನ್ನೆ 102.51 ಇತ್ತು. ಇನ್ನು ಡೀಸೆಲ್ ದರ ಸ್ಥಿರವಾಗಿದ್ದು, ನಿನ್ನೆ 94.40 ಇತ್ತು, ಇಂದು ಹಾಗೆಯೇ ಮುಂದುವರೆದಿದೆ.
ಸಿಎಂ ಎಂ.ಕೆ ಸ್ಟಾಲಿನ್ ನೇತೃತ್ವದ ಸರ್ಕಾರದ ಮೊದಲ ಬಜೆಟ್ ಶುಕ್ರವಾರ ಮಂಡನೆಯಾಗಿದೆ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 3 ರೂ. ಕಡಿತ ಮಾಡುವುದಾಗಿ ಬಜೆಟ್ ಮಂಡನೆ ಮಾಡಿರುವ ಹಣಕಾಸು ಸಚಿವ ಪಿಟಿಆರ್ ಪಳನಿವೇಲ್ ತ್ಯಾಗರಾಜನ್ ಘೋಷಣೆ ಮಾಡಿದ್ದಾರೆ. ಇದರಿಂದ ರಾಜ್ಯ ಸರ್ಕಾರಕ್ಕೆ ಪ್ರತಿ ವರ್ಷ 1,160 ಕೋಟಿ ರೂಪಾಯಿ ಆದಾಯ ನಷ್ಟವಾಗಲಿದೆ.
ಓದಿ : ವಾಹನ ಸವಾರರಿಗೆ ಸಿಹಿ ಸುದ್ದಿ.. ಈ ರಾಜ್ಯದಲ್ಲಿ ಪೆಟ್ರೋಲ್ ಮೇಲಿನ ಟ್ಯಾಕ್ಸ್ ಕಡಿತ!
ಡ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಪೆಟ್ರೋಲ್ ದರ 5 ರೂ. ಕಡಿತ ಮಾಡುತ್ತೇವೆ ಎಂದು ಸಿಎಂ ಎಂ.ಕೆ. ಸ್ಟಾಲಿನ್ ಚುನಾವಣಾ ಪ್ರಚಾರದ ವೇಳೆ ಭರವಸೆ ನೀಡಿದ್ದರು. ಅದರಂತೆ, ಈಗ ಮೊದಲ ಹಂತದಲ್ಲಿ 3 ರೂ. ಕಡಿತ ಮಾಡಿದ್ದಾರೆ.
ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ, ಹರಿಯಾಣ, ಜಮ್ಮ- ಕಾಶ್ಮೀರ, ಒಡಿಶಾ, ಬಿಹಾರ, ಕೇರಳ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ತೈಲ ಬೆಲೆ ಈಗಾಗಲೇ 100ರ ಗಡಿ ದಾಟಿದೆ. ಕರ್ನಾಟಕದಲ್ಲಿ ಇಂದು ಪ್ರತೀ ಲೀಟರ್ ಡೀಸೆಲ್ ಬೆಲೆ 95.26 ಮತ್ತು ಪೆಟ್ರೋಲ್ ದರ 105.25 ಇದೆ.