ನವದೆಹಲಿ: ಗ್ರಾಹಕರು ಮತ್ತು ಉದ್ಯಮಿಗಳು ಹೆಚ್ಚಿನ ಸಾಲವನ್ನು ಪಡೆದುಕೊಳ್ಳುತ್ತಿರುವುದು ಆರ್ಥಿಕ ಚಟುವಟಿಕೆಯ ಸುಧಾರಣೆಯ ಸಂಕೇತವಾಗಿದೆ. ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ವೈಯಕ್ತಿಕ ಮತ್ತು ಕೈಗಾರಿಕಾ ಸಾಲಗಳ ಬೆಳವಣಿಗೆ ದರ ಹೆಚ್ಚಾಗಿದೆ. ಆದರೆ, ಈ ಮಧ್ಯೆಯೇ ಚಿನ್ನದ ಮೇಲಿನ ಸಾಲವೂ ಕೂಡ ಏರುತ್ತಿರುವುದು ಆರ್ಥಿಕ ಕೊರತೆ ಮತ್ತು ನಗದು ಹರಿವಿನ ಸಮಸ್ಯೆಯನ್ನು ಇದು ದೃಢೀಕರಿಸುತ್ತದೆ ಎಂದು ಹಣಕಾಸು ಇಲಾಖೆಯ ವರದಿ ತಿಳಿಸಿದೆ.
ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಉಂಟಾದ ಪ್ರತಿಕೂಲ ಪರಿಣಾಮದಿಂದಾಗಿ ಜನರು ಆರ್ಥಿಕ ಸಂಕಷ್ಟಕ್ಕೀಡಾಗಿ ಚಿನ್ನಾಭರಣವನ್ನು ಅಡಮಾನ ಇಟ್ಟು ಅದರ ಮೇಲೆ ಸಾಲವನ್ನು ಪಡೆಯುತ್ತಿರುವುದು ಆರ್ಥಿಕ ಚೇತರಿಕೆಗೆ ಅಲ್ಪ ಹಿನ್ನಡೆ ಉಂಟು ಮಾಡಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಈ ಬಗ್ಗೆ ಇಲಾಖೆ ಹಂಚಿಕೊಂಡ ಅಧಿಕೃತ ಮಾಹಿತಿಯ ಪ್ರಕಾರ, 2021 ರ ಡಿಸೆಂಬರ್ ತಿಂಗಳಲ್ಲಿ ವೈಯಕ್ತಿಕ ಸಾಲಗಳ ಪ್ರಮಾಣ ಶೇ.14.3 ರಷ್ಟು ದಾಖಲಾದರೆ, ಕೈಗಾರಿಕಾ ಸಾಲಗಳು ಶೇ.7.6 ರಷ್ಟು ಹೆಚ್ಚಾಗಿವೆ. ಇದರಲ್ಲಿ ಮಧ್ಯಮ ಕೈಗಾರಿಕೆ, ಸಣ್ಣ ಮತ್ತು ಅತಿಸಣ್ಣ(MSME) ಕೈಗಾರಿಕೆಗಳ ಸಾಲದ ಪ್ರಮಾಣ ಬೇರೆ ಬೇರೆಯಾಗಿದೆ. ಇದರಲ್ಲಿ ಸಣ್ಣ, ಅತಿ ಸಣ್ಣ ಕೈಗಾರಿಕೆಗಳ ಸಾಲ ಪಡೆಯುವ ಪ್ರಮಾಣಕ್ಕೆ ಹೋಲಿಸಿದರೆ ಮಧ್ಯಮ ಕೈಗಾರಿಕೆಗಳಿಗೆ ಸಾಲ ಪಡೆಯುವ ಪ್ರಮಾಣ ಹೆಚ್ಚಿದೆ.
ಕಳೆದ ವರ್ಷದ ಇದೇ ಅವಧಿಗೆ ಮಧ್ಯಮ ಕೈಗಾರಿಕೆಗಳ ಆರಂಭಕ್ಕೆ 86.5 ಪ್ರತಿಶತ ಸಾಲ ಪಡೆದರೆ, ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗಾಗಿ ಶೇಕಡಾ 20.5 ರಷ್ಟು ಸಾಲ ಪಡೆಯಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಇದಲ್ಲದೇ, ಬುಧವಾರ ಬಿಡುಗಡೆಯಾದ ಈ ವರ್ಷದ ಜನವರಿ ತಿಂಗಳ ಆರ್ಥಿಕ ವರದಿಯಲ್ಲಿ ವೈಯಕ್ತಿಕ ಸಾಲಗಳ ಪಡೆಯುವಿಕೆಯು ಹೆಚ್ಚಳವಾಗಿದೆ. ಗ್ರಾಹಕರು ಪಡೆಯುವ ಬೆಲೆಬಾಳುವ ವಸ್ತುಗಳ ಮೇಲಿನ ಸಾಲ, ಚಿನ್ನದ ಮೇಲಿನ ಸಾಲ, ಮತ್ತು ಇತರ ಸಾಲಗಳು ಕೂಡ ಹೆಚ್ಚಳವಾಗಿವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಚಿನ್ನದ ಸಾಲಗಳ ಏರಿಕೆ ಆತಂಕಕ್ಕೆ ಕಾರಣ: ವೈಯಕ್ತಿಕ, ಕೈಗಾರಿಕಾ ಸಾಲವು ಹೆಚ್ಚಾದುದರ ಮಧ್ಯೆಯೇ ಚಿನ್ನದ ಸಾಲ ಪಡೆಯುವುದು ಏರಿಕೆ ಕಂಡಿದೆ. ಇದು ವೈಯಕ್ತಿಕ ಆದಾಯ ಮತ್ತು ನಗದು ಹರಿವಿನ ಮೇಲೆ ಒತ್ತಡ ಸೂಚಿಸುತ್ತದೆ ಎಂದು ಇಲಾಖೆ ಕಳವಳ ವ್ಯಕ್ತಪಡಿಸಿದೆ.
ಹೆಚ್ಚಿದ ಕೈಗಾರಿಕಾ ಸಾಲಗಳು: ಕಳೆದ ವರ್ಷದ ಡಿಸೆಂಬರ್ನಲ್ಲಿ 3.8 ರಷ್ಟಿದ್ದ ಉದ್ಯಮಗಳ ಆರಂಭಕ್ಕೆ ಪಡೆಯುವ ಸಾಲವು ಈ ವರ್ಷ ಅದು ಶೇಕಡಾ 7.6 ಕ್ಕೆ ಹೆಚ್ಚಿದೆ. ಇದರಲ್ಲಿ ಮಧ್ಯಮ ಕೈಗಾರಿಕೆಗಳಿಗಾಗಿ 86.5 ಪ್ರತಿಶತ ಮತ್ತು ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಗಾಗಿ ಶೇ.20.5 ರಷ್ಟು ಸಾಲದ ದರ ಹೆಚ್ಚಿರುವುದು ತಜ್ಞರನ್ನು ಆಶ್ಚರ್ಯಗೊಳಿಸಿದೆ ಎಂದು ವರದಿ ಹೇಳಿದೆ.
ಎಂಎಸ್‌ಎಂಇಗಳಲ್ಲಿ ಕ್ರೆಡಿಟ್ ನಿಯೋಜನೆಯನ್ನು ಬೆಂಬಲಿಸುವ ಸಲುವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ನಲ್ಲಿ ತುರ್ತು ಕ್ರೆಡಿಟ್ ಲಿಂಕ್ಡ್ ಗ್ರೋತ್ ಸ್ಕೀಮ್ (ECLGS) ಅನ್ನು ಒಂದು ವರ್ಷದವರೆಗೆ ವಿಸ್ತರಿಸಿದ್ದಾರೆ. ಇದಲ್ಲದೇ, ಆರ್ಬಿಐ ಬಡ್ಡಿದರದ ಮೇಲಿನ ಬದಲಾವಣೆಯೂ ಕೂಡ ಸಾಲದ ಬೆಲವಣಿಗೆಗೆ ಕಾರಣ ಎಂದು ಹೇಳಲಾಗಿದೆ.
ಓದಿ: ಎಸ್ಬಿಐಗಿಂತ ಹೆಚ್ಚಾಗಿ ಎಲ್ಐಸಿಗೆ ಹರಿದು ಹೋಗುತ್ತಿದೆ ಭಾರತೀಯರ ಉಳಿತಾಯದ ಹಣ: ಯುಬಿಎಸ್ ವರದಿ