ನವದೆಹಲಿ: ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇಕಡಾ 33ರಷ್ಟು ಸ್ಥಾನಗಳನ್ನು ಮೀಸಲಿಡುವ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆ ನಿನ್ನೆ (ಬುಧವಾರ) ಲೋಕಸಭೆಯಲ್ಲಿ ಒಮ್ಮತದಿಂದ ಅಂಗೀಕಾರವಾಗಿದ್ದು, ಇಂದು (ಗುರುವಾರ) ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ. ಸಂಸತ್ ವಿಶೇಷ ಅಧಿವೇಶನ ಶನಿವಾರ ಮುಗಿಯಲಿದ್ದು, ಚರ್ಚೆ ಮತ್ತು ಅಂಗೀಕಾರ ನಾಳೆಯೊಳಗೆ ಪೂರ್ಣವಾಗಬೇಕಿದೆ.
27 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ಕೇಂದ್ರ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಿ ಈಗ ಸದನದಲ್ಲಿ ಮಂಡಿಸಿದೆ. ಇದಕ್ಕೆ ವಿಪಕ್ಷಗಳೂ ಪೂರ್ಣ ಬೆಂಬಲ ನೀಡಿವೆ. ಹೀಗಾಗಿ ಲೋಕಸಭೆಯಲ್ಲಿ 454 ಸದಸ್ಯರು ಮಸೂದೆ ಪರವಾಗಿದ್ದರೆ ಇಬ್ಬರು ಮಾತ್ರ ತಿರಸ್ಕರಿಸಿದ್ದರು. ರಾಜ್ಯಸಭೆಯಲ್ಲೂ ಮಸೂದೆ ಯಾವುದೇ ವಿರೋಧವಿಲ್ಲದೇ ಅಂಗೀಕಾರವಾಗುವುದು ನಿಚ್ಚಳ.
2010 ರಲ್ಲಿ ಮಂಡನೆಯಾಗಿದ್ದ ಇದೇ ವಿಧೇಯಕವನ್ನು ರಾಜ್ಯಸಭೆ ಅಂಗೀಕರಿಸಿತ್ತು. ಇದಾದ ಬಳಿಕ ಲೋಕಸಭೆಯಲ್ಲಿ ಒಮ್ಮತ ಮೂಡದ ಕಾರಣ ಮಸೂದೆ ಬಿದ್ದು ಹೋಗಿತ್ತು. ಸರ್ಕಾರ ಬದಲಾದ ಬಳಿಕ ವಿಧೇಯಕ ಮೂಲೆಗುಂಪಾಗಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಸೂದೆಗೆ ಕೆಲ ತಿದ್ದುಪಡಿ ಮಾಡಿದ್ದು, ಸಂಸತ್ತಿನಲ್ಲಿ ಮಂಡಿಸಿದೆ.
ಮಸೂದೆ ಜಾರಿಗಿರುವ ಅಡ್ಡಿಗಳೇನು?: ಐತಿಹಾಸಿಕ ಮಸೂದೆಯನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದರೂ ಅದರ ಅನುಷ್ಠಾನ ತಕ್ಷಣಕ್ಕೆ ಸಾಧ್ಯವಿಲ್ಲ. ಜನಗಣತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಗಳು ಇದಕ್ಕೆ ಪ್ರಮುಖ ಕಾರಣ. 2021 ರಲ್ಲಿ ನಡೆಯಬೇಕಿದ್ದ ಜನಗಣತಿ ಕೋವಿಡ್ ಕಾರಣಕ್ಕಾಗಿ ಮುಂದೂಡಿಕೆಯಾಗಿದೆ. 2026 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಕಾರ್ಯ ನಡೆಯಲಿದೆ. ಬಳಿಕವಷ್ಟೇ ಮಹಿಳಾ ಸಂಖ್ಯೆ ಮತ್ತು ಜನಸಂಖ್ಯೆ ಆಧಾರದ ಮೇಲೆ ಮಹಿಳೆಯರಿಗೆ ಸ್ಥಾನ ಮೀಸಲಾಗಲಿವೆ.
2029 ರಲ್ಲಿ ಮೀಸಲಾತಿ ಜಾರಿ ಸಾಧ್ಯತೆ: ತಡೆ ಬಿದ್ದಿರುವ ಜನಗಣತಿಯನ್ನು ಸರ್ಕಾರ 2026 ರಲ್ಲಿ ನಡೆಸುವ ಸಾಧ್ಯತೆ ಇದೆ. ಈ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ಸದನದಲ್ಲಿ ಮಸೂದೆಗೆ ಉತ್ತರ ನೀಡುವಾಗ ಈ ಸುಳಿವು ನೀಡಿದ್ದಾರೆ. ಜನಗಣತಿ ಮತ್ತು ರಾಜ್ಯ ವಿಧಾನಸಭೆ ಕ್ಷೇತ್ರಗಳ ಪುನರ್ ವಿಂಗಡಣೆಯು 2026-27 ರಲ್ಲಿ ನಡೆದಲ್ಲಿ ಮೀಸಲು ಪ್ರಕ್ರಿಯೆಯೂ ಮುಗಿದರೆ, 2029 ರಲ್ಲಿ ಈಗ ಅಂಗೀಕರಿಸಿರುವ ಮಹಿಳಾ ಮೀಸಲಾತಿ ಮಸೂದೆ ಕಾಯ್ದೆಯಾಗಿ ಜಾರಿಗೆ ಬರಲಿದೆ ಎಂಬುದು ತಜ್ಞರ ವಿಶ್ಲೇಷಣೆ.
ಶೀಘ್ರ ಜಾರಿಗೆ ವಿಪಕ್ಷಗಳ ಒತ್ತಾಯ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೀಸಲಾತಿ ಮಸೂದೆಯನ್ನು ಮಂಡಿಸಲಾಗಿದೆ ಎಂದು ವಿಪಕ್ಷಗಳು ಆರೋಪಿಸಿವೆ. 2024 ರ ಲೋಕಸಭೆ ಚುನಾವಣೆ ವೇಳೆಗೆ ಜಾರಿ ಸಾಧ್ಯವಿಲ್ಲ ಎಂದಾದರೆ, ಮಸೂದೆ ತಂದಿರುವ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿವೆ. ಹಿಂದುಳಿದ ವರ್ಗ ಮತ್ತು ಮುಸ್ಲಿಮರಿಗೆ ಒಳಮೀಸಲಾತಿ ನೀಡಬೇಕು ಎಂದು ಆಗ್ರಹಿಸಿವೆ.
ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆ ಚರ್ಚೆ ವೇಳೆ ಅಮಿತ್ ಶಾ v/s ರಾಹುಲ್ ಗಾಂಧಿ ಒಬಿಸಿ ಮೀಸಲು ವಾಗ್ಯುದ್ಧ