ನವದೆಹಲಿ: ಸೋನಿಯಾ ಗಾಂಧಿ ಅವರಿಗೆ ಇಡಿ ವಿಚಾರಣೆ ಮತ್ತು ಜಿಎಸ್ಟಿ, ಹಣದುಬ್ಬರದ ಬಗ್ಗೆ ಚರ್ಚೆಗೆ ಒತ್ತಾಯಿಸಿ ಪ್ರತಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆ ಅಧಿವೇಶನದ 9ನೇ ದಿನವೂ ಮುಂದುವರಿದಿದೆ. ಇದರಿಂದ 11 ಗಂಟೆಗೆ ಆರಂಭವಾದ ರಾಜ್ಯಸಭೆ ಮತ್ತು ಲೋಕಸಭೆ ಕಲಾಪಗಳು 3 ಬಾರಿ ಮುಂದೂಡಿಕೆಯಾದವು. ಮಧ್ಯಾಹ್ನ 2ಕ್ಕೆ ಮತ್ತೆ ಆರಂಭವಾಗಲಿವೆ.
ಹಣದುಬ್ಬರ ಮತ್ತು ಅಗತ್ಯ ವಸ್ತುಗಳ ಮೇಲೆ ವಿಧಿಸಲಾದ ಜಿಎಸ್ಟಿಯ ವಿರುದ್ಧ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಸಮರ ಸಾರಿವೆ. ಇದು ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳ ಮಧ್ಯೆ ತಿಕ್ಕಾಟಕ್ಕೆ ಕಾರಣವಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೋವಿಡ್ಗೆ ತುತ್ತಾಗಿದ್ದು, ಚೇತರಿಸಿಕೊಂಡ ಬಳಿಕ ಚರ್ಚೆಗೆ ಸರ್ಕಾರ ಅನುಮತಿಸಲಾಗುವುದು ಎಂದಿದೆ. ಆದರೆ, ಇದಕ್ಕೊಪ್ಪದ ವಿಪಕ್ಷಗಳು ನಿರಂತರ ಧರಣಿ ಮುಂದುವರಿಸಿವೆ.
ಸಂಸದರ ಅಮಾನತು: ಇನ್ನು ಮೊನ್ನೆಯಷ್ಟೇ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ದುರ್ನಡತೆ ಆರೋಪದ ಮೇಲೆ ನಾಲ್ವರು ಕಾಂಗ್ರೆಸ್ ಸಂಸದರನ್ನು ಅಧಿವೇಶನದ ಅವಧಿಯವರೆಗೂ ಅಮಾನತು ಮಾಡಿದ್ದರು.
ನಿನ್ನೆ ರಾಜ್ಯಸಭೆಯಲ್ಲೂ ತೀವ್ರ ಗದ್ದಲ ಉಂಟು ಮಾಡಿದ ಕಾಂಗ್ರೆಸ್, ಡಿಎಂಕೆ, ತೃಣಮೂಲ ಕಾಂಗ್ರೆಸ್ ಮತ್ತು ಓರ್ವ ಆಪ್ ಸಂಸದರನ್ನು ಅಶಿಸ್ತಿನ ಕಾರಣಕ್ಕಾಗಿ ರಾಜ್ಯಸಭೆಯಲ್ಲಿ ಒಂದು ವಾರ ಅಮಾನತು ಮಾಡಲಾಗಿದೆ. ಇದರಲ್ಲಿ ತೃಣಮೂಲ ಕಾಂಗ್ರೆಸ್‌ನ 7 ರಾಜ್ಯಸಭಾ ಸಂಸದರಿದ್ದರೆ, ಸಿಪಿಎಂ, ಎಡಪಕ್ಷಗಳು, ಡಿಎಂಕೆ, ಆಪ್ ಸಂಸದರು ನಿಷೇಧ ಶಿಕ್ಷೆಗೆ ಒಳಗಾಗಿದ್ದಾರೆ.
ಮೂರು ಬಾರಿ ಮುಂದೂಡಿಕೆ: ಬೆಳಗ್ಗೆ 11 ಗಂಟೆಗೆ ಆರಂಭವಾದ ರಾಜ್ಯಸಭೆ, ಲೋಕಸಭೆ ಅಧಿವೇಶನ ಮೂರು ಬಾರಿ ಮುಂದೂಡಿಕೆಯಾಗಿದೆ. ವಿಪಕ್ಷಗಳ ಭಾರಿ ಗದ್ದಲ ಮುಂದುವರಿಸಿದ ಕಾರಣ ಕಲಾಪ ಸುಗಮವಾಗಿ ನಡೆಯುತ್ತಿಲ್ಲ. ಕಲಾಪ ಆರಂಭವಾದ ಪ್ರತಿ ಬಾರಿ ಬಾವಿಗಿಳಿದು ಧರಣಿ ನಡೆಸುತ್ತಿರುವ ವಿಪಕ್ಷಗಳ ಸದಸ್ಯರಿಂದ ಚರ್ಚೆಗಳೇ ನಡೆಯುತ್ತಿಲ್ಲ.
ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ: ಉಭಯ ಸದನಗಳಲ್ಲಿ ಗದ್ದಲ ಮಾಡಿ ಅಮಾನತಾದ ಸಂಸದರು ಸಂಸತ್ ಆವರಣದಲ್ಲಿರುವ ಮಹಾತ್ಮ ಗಾಂಧಿ ಪುತ್ಥಳಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ಅಮಾನತು ಆದೇಶವನ್ನು ವಾಪಸ್ ಪಡೆಯಬೇಕು. ನಮ್ಮ ಧ್ವನಿ ಅಡಗಿಸುವ ಕೆಲಸವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: 3ನೇ ಬಾರಿಗೆ ಇಡಿಯೆದುರು ಹಾಜರಾದ ಸೋನಿಯಾ; ಮುಂದುವರೆದ ಕಾಂಗ್ರೆಸ್ ಪ್ರತಿಭಟನೆ