ಹೈದರಾಬಾದ್ (ಸಿಂಧ್): ಟೊಮೇಟೊ ಆಮದನ್ನು ಮುಂದುವರಿಸಿದ್ದಕ್ಕಾಗಿ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಸಿಂಧ್ ಪ್ರಾಂತ್ಯದ ಹೈದರಾಬಾದ್ ನಗರದ ರೈತರು ಪ್ರತಿಭಟನೆ ನಡೆಸಿದ್ದಾರೆ.
ಟೊಮೇಟೊ ಬೆಲೆ ಇಳಿಕೆಯಾಗಿರುವುದರಿಂದ ಬೇಸತ್ತ ಪ್ರತಿಭಟನಾ ನಿರತ ರೈತರು, ಕೊಯ್ಯಲು ಸಿದ್ದವಾಗಿದ್ದ ಸ್ಥಳೀಯ ಟೊಮೇಟೊ ಬೆಳೆ ನಾಶಪಡಿಸಿದ್ದಾರೆ.
ಸಿಂಧ್ ಅಬಾದ್ಗರ್ ಮಂಡಳಿ (ಎಸ್‌ಎಬಿ) ಪ್ರಕಾರ, ಒಂದೂವರೆ ತಿಂಗಳ ಹಿಂದೆ ಪರಿಸ್ಥಿತಿಯ ಬಗ್ಗೆ ಫೆಡರಲ್ ಸರ್ಕಾರಕ್ಕೆ ಮಾಹಿತಿ ನೀಡಲಾಗಿದ್ದರೂ ಆಮದು ಪ್ರಕ್ರಿಯೆಯನ್ನು ನಿಲ್ಲಿಸಿರಲಿಲ್ಲ. ಆಮದು ಮಾಡಿದ ಟೊಮೇಟೊ ಮಾರುಕಟ್ಟೆಗಳಿಗೆ ಸರಬರಾಜು ಮಾಡುವುದನ್ನು ಮುಂದುವರಿಸುತ್ತಿದ್ದಂತೆ, ಸ್ಥಳೀಯ ದರವೂ ಕುಸಿಯಿತು. ಆಮದಿಗೂ ಮೊದಲು ಸ್ಥಳೀಯ ರೈತರು ಪ್ರತಿ ಕೆಜಿ ಟೊಮೇಟೊವನ್ನು 15 ರೂ.ಗೆ ಮಾರಾಟ ಮಾಡುತ್ತಿದ್ದರು. ಆದ್ರೀಗ ಟೊಮೇಟೊ ದರವನ್ನು ದಿಢೀರ್ 5 ರೂಪಾಯಿಗೆ ಇಳಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಓದಿ: "ತಮಿಳುನಾಡು ಭವಿಷ್ಯ ಯುವಕರಿಂದ ನಿರ್ಧಾರ, ಆರ್ಎಸ್ಎಸ್ನಿಂದಲ್ಲ": ರಾಹುಲ್ ಗಾಂಧಿ ವಾಗ್ದಾಳಿ
ಕಳೆದವಾರ ಸಿಂಧ್ ಸರ್ಕಾರವು ಆಮದು ನಿಷೇಧಿಸಿ, ಸ್ಥಳೀಯ ಬೆಳೆಗಾರರಿಗೆ ರೈತರಿಗೆ ಅನುಕೂಲವಾಗುವಂತೆ ಈರುಳ್ಳಿ ರಫ್ತು ಮಾಡುವುದನ್ನು ಉತ್ತೇಜಿಸುವಂತೆ ಕೇಂದ್ರಕ್ಕೆ ಕೋರಿತ್ತು. ಪಾಕಿಸ್ತಾನದ ಎಲ್ಲಾ ಪ್ರಾಂತ್ಯಗಳಿಗೆ ಹೋಲಿಸಿದ್ರೆ, ಈರುಳ್ಳಿ ಮತ್ತು ಟೊಮೇಟೊ ಉತ್ಪಾದನೆಯಲ್ಲಿ ಸಿಂಧ್ ಪ್ರಥಮ ಸ್ಥಾನ ಪಡೆದಿದೆ. ಈ ವರ್ಷ ಈರುಳ್ಳಿ ಮತ್ತು ಟೊಮೇಟೊದ ಬಂಪರ್ ಬೆಳೆ ಉತ್ಪಾದಿಸುವಲ್ಲಿ ಸಿಂಧ್ ಪ್ರದೇಶ ಯಶಸ್ವಿಯಾಗಿತ್ತು.
ಆದ್ರೀಗ ಈರುಳ್ಳಿ ಮತ್ತು ಟೊಮೇಟೊ ಬೆಲೆ ಕುಸಿತವಾಗಿರುವುದರಿಂದ ರೈತರಿಗೆ ಉತ್ತಮ ಆದಾಯ ಗಳಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಟೊಮೇಟೊ ಆಮದಿಗೆ ನಿಷೇಧ ಹೇರಬೇಕೆಂದು ರೈತರು ಪ್ರತಿಭಟನೆ ಆರಂಭಿಸಿದ್ದಾರೆ ಎಂದು ಪ್ರಾಂತೀಯ ಸರ್ಕಾರ ತಿಳಿಸಿದೆ.