ಇಸ್ಲಾಮಾಬಾದ್(ಪಾಕಿಸ್ತಾನ): ಭಾರತದ ವಿದೇಶಾಂಗ ನೀತಿ ಸ್ವತಂತ್ರ ಮತ್ತು ಜನರ ಒಳಿತನ್ನೇ ಬಯಸುತ್ತದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ರಷ್ಯಾದ ಜೊತೆಗೆ ತೈಲ ಒಪ್ಪಂದ ಮಾಡಿಕೊಂಡ ವಿಷಯದ ಬಗ್ಗೆ ಮಾತನಾಡಿರುವ ಇಮ್ರಾನ್ಖಾನ್, ರಷ್ಯಾದ ತೈಲದ ಮೇಲೆ ಅಮೆರಿಕದ ನಿರ್ಬಂಧಗಳ ಹೊರತಾಗಿಯೂ ಆ ದೇಶದಿಂದ ಭಾರತ ತೈಲ ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿರುವುದಲ್ಲದೇ, ಅಮೆರಿಕದ ಜೊತೆ ಉತ್ತಮ ಸಂಬಂಧ ಕಾಪಾಡಿಕೊಂಡಿರುವುದು ಶ್ಲಾಘನೀಯ. ಇದು ಆ ಭಾರತದ ಪ್ರಜೆಗಳ ಒಳಿತಿಗೆ ಪೂರಕವಾಗಿದೆ ಎಂದು ಹೇಳಿದ್ದಾರೆ.
ನೆರೆಯ ದೇಶ ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಂದಿದ್ದಕ್ಕಾಗಿ ನಾನು ಪ್ರಶಂಸಿಸುತ್ತೇನೆ. ಭಾರತ ಅಮೆರಿಕದ ಮೈತ್ರಿ ದೇಶವಾಗಿದೆ. ಅಲ್ಲದೇ, ಕ್ವಾಡ್ನ ಭಾಗವಾಗಿದೆ. ಉಕ್ರೇನ್- ರಷ್ಯಾ ಯುದ್ಧದಲ್ಲಿ ತಟಸ್ಥ ಧೋರಣೆ ಅನುಸರಿಸಿದೆ. ಅಲ್ಲದೇ, ಈ ವೇಳೆಯೇ ರಷ್ಯಾದಿಂದ ತೈಲ ಆಮದಿಗೆ ಮುಂದಾಗಿದೆ ಎಂದಿದ್ದಾರೆ.
ಅವಿಶ್ವಾಸ ಮಂಡನೆಗೆ ಗುರಿಯಾಗಿರುವ ಇಮ್ರಾನ್ ಖಾನ್ ಇದೇ ವೇಳೆ ತಮ್ಮ ಸರ್ಕಾರದ ಬಗ್ಗೆಯೂ ಮಾತನಾಡಿದ್ದು, ನಾನು ಯಾರ ಮುಂದೆಯೂ ತಲೆಬಾಗಲ್ಲ. ನನ್ನ ರಾಷ್ಟ್ರವೂ ಕೂಡ ಯಾರ ಮುಂದೆ ಮಂಡಿಯೂರಲು ಬಿಡಲ್ಲ ಎಂದಿದ್ದಾರೆ.