ಜಮ್ಮು-ಕಾಶ್ಮೀರ : ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಯುತ್ತಿರುವ ಭಯೋತ್ಪಾದನೆಯನ್ನು ಜೀವಂತವಾಗಿಡಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಅವರು ಪಾಕಿಸ್ತಾನದ ವಿರುದ್ಧ ಆರೋಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಅವರು ಅಧಂಪುರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಪಾಕಿಸ್ತಾನದ ವಿರುದ್ಧ ಒಂದರ ಮೇಲೆ ಮತ್ತೊಂದರಂತೆ ಆರೋಪಗಳ ಮಳೆ ಸುರಿಸಿದರು. ಜೊತೆಗೆ ಪಾಕಿಸ್ತಾನದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಯುತ್ತಿರುವ ಭಯೋತ್ಪಾದನೆಯನ್ನು ಜೀವಂತವಾಗಿಡಲು ಎಲ್ಲಾ ಪ್ರಯತ್ನಗಳನ್ನು ಪಾಕಿಸ್ತಾನ ಮಾಡುತ್ತಿದೆ. ಆದರೆ, ನಮ್ಮ ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರವನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸುವಲ್ಲಿ ನಿರತವಾಗಿವೆ ಎಂದು ಹೇಳಿದರು.
ಪಾಕಿಸ್ತಾನವು ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಮಾದಕ ವಸ್ತುಗಳನ್ನು ಗಡಿಯುದ್ದಕ್ಕೂ ಕಳ್ಳಸಾಗಣೆ ಮಾಡುತ್ತಿದೆ. ಮಾದಕವಸ್ತು ಕಳ್ಳಸಾಗಣೆಯಿಂದ ಗಳಿಸುವ ಹಣವನ್ನು ಉಗ್ರಗಾಮಿಗಳನ್ನು ಸಕ್ರಿಯವಾಗಿರಿಸಲು ಬಳಸುತ್ತಿದೆ. ಆದರೆ, ಅವರ ಪ್ರತಿ ಪ್ರಯತ್ನವನ್ನು ಇಲ್ಲಿ ವಿಫಲಗೊಳಿಸಲಾಗುತ್ತಿದೆ ಎಂದರು.
ಇದನ್ನೂ ಓದಿ: ವಿದೇಶಿ ರಕ್ಷಣಾ ಉತ್ಪನ್ನ ಖರೀದಿ ವಿವಾದಕ್ಕೆ ಸ್ವದೇಶಿ ಉತ್ಪನ್ನ ತಯಾರಿಕೆಯೇ ಪರಿಹಾರ - ಪ್ರಧಾನಿ ಮೋದಿ
ಕಳೆದ ವರ್ಷ ಸುಮಾರು 180 ಉಗ್ರರನ್ನು ಹತ್ಯೆ ಮಾಡಲಾಗಿದ್ದು, 300ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ನಮ್ಮ ಪೊಲೀಸರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ತಿಳಿಸಿದರು.