ಅಮೃತಸರ: ಮೀನುಗಾರಿಕೆ ವೇಳೆ ಅಕ್ರಮವಾಗಿ ಗಡಿ ದಾಟಿ ಪಾಕಿಸ್ತಾನದ ಬಂಧನಕ್ಕೊಳಗಾಗಿದ್ದ 80ಕ್ಕೂ ಹೆಚ್ಚು ಭಾರತೀಯ ಮೀನುಗಾರರನ್ನು ಅಲ್ಲಿನ ಸರ್ಕಾರ ಗುರುವಾರ ತಡರಾತ್ರಿ ಬಿಡುಗಡೆ ಮಾಡಿದೆ. 2 ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದ ಮೀನುಗಾರರು ಭಾರತಕ್ಕೆ ಮರಳಿ ಕುಟುಂಬದೊಂದಿಗೆ ದೀಪಾವಳಿ ಆಚರಿಸಲಿದ್ದಾರೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದರು.
ಬಿಡುಗಡೆಯಾಗಿರುವ ಮೀನುಗಾರರನ್ನು ಪಾಕಿಸ್ತಾನ ಸೇನೆ ಗುಜರಾತ್ನ ವಿವಿಧ ಪ್ರದೇಶಗಳಿಂದ 2019-20 ರಲ್ಲಿ ಬಂಧಿಸಿತ್ತು. ಮೀನುಗಾರಿಕೆ ನಡೆಸುತ್ತಿರುವಾಗ ಇವರು ಅಚಾನಕ್ಕಾಗಿ ಪಾಕ್ ಗಡಿಯೊಳಗೆ ಹೋದಾಗ ಸೇನೆ ಬಂಧಿಸಿ ಜೈಲಿಗಟ್ಟಿತ್ತು. 80 ಕ್ಕೂ ಅಧಿಕ ಜನರನ್ನು ಅಟ್ಟಾರಿ ವಾಘಾ ಗಡಿಯಿಂದ ಮೂಲಕ ಭಾರತಕ್ಕೆ ಕಳುಹಿಸಲಾದ ಈ ಮೀನುಗಾರರನ್ನು ಕರೆದೊಯ್ಯಲು ಗುಜರಾತ್ ಸರ್ಕಾರದ ತಂಡ ಪಂಜಾಬ್ ತಲುಪಿದೆ.
ತಾಯ್ನಾಡಿಗೆ ಮರಳಿದ ಮೀನುಗಾರರು: ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಅಧಿಕಾರಿಗಳು, ಅಕ್ರಮ ವಿದೇಶಿ ವಲಸಿಗರು ಮತ್ತು ನಾಗರಿಕರನ್ನು ದೇಶದಿಂದ ಹೊರಹಾಕಲು ಪಾಕಿಸ್ತಾನ ಸರ್ಕಾರ ನಡೆಸುತ್ತಿರುವ ಅಭಿಯಾನದ ಭಾಗವಾಗಿ ಭಾರತೀಯ ಮೀನುಗಾರರನ್ನು ಇದೀಗ ಬಿಡುಗಡೆ ಮಾಡಲಾಗಿದೆ. ತಾಯ್ನಾಡಿಗೆ ಮರಳಿರುವ ಮೀನುಗಾರರು ತಮ್ಮ ಕುಟುಂಬಗಳೊಂದಿಗೆ ದೀಪಾವಳಿಯನ್ನು ಆಚರಿಸಲಿದ್ದಾರೆ ಎಂದರು.
ಪೊಲೀಸ್ ಅಧಿಕಾರಿ ಅರುಣ್ ಮಹಲ್ ಮಾತನಾಡಿ, ಈ ಮೀನುಗಾರರು 2019 ಮತ್ತು 20 ರಲ್ಲಿ ಪಾಕ್ ಸೇನೆಯ ಬಂಧನಕ್ಕೆ ಒಳಗಾಗಿದ್ದರು. ಪಾಕಿಸ್ತಾನದ ಗಡಿಯಲ್ಲಿ ತಪ್ಪಾಗಿ ಪ್ರವೇಶಿಸಿದ ಕಾರಣಕ್ಕಾಗಿ ಜೈಲು ಪಾಲಾಗಿದ್ದರು. ಶಿಕ್ಷೆಯನ್ನು ಪೂರೈಸಿದ ಕಾರಣ, ಗುರುವಾರ ತಡರಾತ್ರಿ ಪಾಕಿಸ್ತಾನ ಸರ್ಕಾರ ಬಿಡುಗಡೆ ಮಾಡಿದೆ. ಅಟ್ಟಾರಿ ವಾಘಾ ಗಡಿ ಮೂಲಕ ಬಿಎಸ್‌ಎಫ್‌ಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.
ಮೀನುಗಾರರನ್ನು ಬಿಎಸ್‌ಎಫ್ ಅಧಿಕಾರಿಗಳು ಪರಿಶೀಲಿಸಿದ ನಂತರ ಅಮೃತಸರದ ರಂಜಿತ್ ಅವೆನ್ಯೂಗೆ ಕಳುಹಿಸಲಾಯಿತು. ನಂತರ ಅಮೃತಸರ ರೆಡ್ ಕ್ರಾಸ್ ಭವನದಲ್ಲಿ ತಡರಾತ್ರಿ ತಂಗಲು ವ್ಯವಸ್ಥೆ ಮಾಡಲಾಯಿತು. ಈಗ ಎಲ್ಲ ಮೀನುಗಾರರು ತಮ್ಮ ತಮ್ಮ ಕುಟುಂಬಗಳನ್ನು ಸೇರಲು ಮರಳಿದ್ದಾರೆ. ಗುಜರಾತ್ ಅಧಿಕಾರಿಗಳ ತಂಡ ಅವರ ಕರೆದೊಯ್ಯಲು ಬಂದಿದೆ ಎಂದು ಮಾಹಿತಿ ನೀಡಿದರು.
ನೆರವಾದ ಪಾಕ್ ಟ್ರಸ್ಟ್: ಬಿಡುಗಡೆಯಾದ ಭಾರತೀಯ ಮೀನುಗಾರರು ಸುರಕ್ಷಿತವಾಗಿ ಭಾರತ ತಲುಪಲು ಪಾಕಿಸ್ತಾನದ ಈಧಿ ವೆಲ್ಫೇರ್ ಟ್ರಸ್ಟ್ ನೆರವು ನೀಡಿದೆ. ಭಾರತೀಯ ಮೀನುಗಾರರನ್ನು ಲಾಹೋರ್ ತಲುಪಲು ಟ್ರಸ್ಟ್ ಮೂಲಕ ವ್ಯವಸ್ಥೆ ಮಾಡಿದ್ದನ್ನು ನಾವಿಲ್ಲಿ ಗಮನಿಸಬೇಕು. ಮೀನುಗಾರರಿಗೆ ಮನೆಗೆ ಕೊಂಡೊಯ್ಯಲು ಉಡುಗೊರೆಗಳು ಮತ್ತು ಸ್ವಲ್ಪ ಹಣವನ್ನೂ ನೀಡಲಾಗಿದೆ. ಪಾಕಿಸ್ತಾನ ಮತ್ತು ಭಾರತವು ಸಮುದ್ರ ಗಡಿ ಉಲ್ಲಂಘಿಸಿದ್ದಕ್ಕಾಗಿ ಮೀನುಗಾರರನ್ನು ಬಂಧಿಸುತ್ತದೆ. ಕೆಲವು ಸಮಯದ ಹಿಂದೆ, ಭಾರತ ಮತ್ತು ಪಾಕಿಸ್ತಾನಿ ಸರ್ಕಾರಗಳು ಪರಸ್ಪರ ಒಪ್ಪಂದದ ಮೇರೆಗೆ ಮೀನುಗಾರರನ್ನು ಬಿಡುಗಡೆ ಮಾಡಿದ್ದವು.
ಇದನ್ನೂ ಓದಿ: ಅಯೋಧ್ಯೆಯಲ್ಲಿ ದೀಪೋತ್ಸವ : 24 ಲಕ್ಷ ದೀಪಗಳಿಂದ ಗಿನ್ನೆಸ್ ದಾಖಲೆಗೆ ಸಜ್ಜು, ಜಾರ್ಖಂಡ್ನ ಆದಿವಾಸಿಗಳು ಭಾಗಿ