ನವದೆಹಲಿ: ರಾಜ್ಯಸಭೆ, ಲೋಕಸಭೆ ಮಾನ್ಸೂನ್ ಅಧಿವೇಶನ ಆರಂಭಗೊಂಡಾಗಿನಿಂದಲೂ ವಿರೋಧ ಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಗದ್ದಲ, ಗಲಾಟೆ ನಡೆಸುತ್ತಿವೆ. ಪೆಗಾಸಸ್,ತೈಲ ಬೆಲೆ ಏರಿಕೆ ಹಾಗೂ ಕೃಷಿ ಕಾಯ್ದೆ ಸೇರಿದಂತೆ ಅನೇಕ ವಿಷಯಗಳನ್ನಿಟ್ಟುಕೊಂಡು ಆಕ್ರೋಶ ವ್ಯಕ್ತಪಡಿಸುತ್ತಿವೆ. ಇಂದು ಕೂಡಾ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಸಂಸದರು ಗಲಾಟೆ ನಡೆಸಿದರು.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಕೃಷಿ ಕಾಯ್ದೆ ಹಿಂಪಡೆದುಕೊಳ್ಳುವಂತೆ ಒತ್ತಾಯಿಸಿ, ಜೈ ಜವಾನ್, ಜೈ ಕಿಸಾನ್ ಘೋಷಣೆ ಕೂಗಿದರು. ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವಿರೋಧ ಪಕ್ಷಗಳ ನಾಯಕರು ರಾಜ್ಯಸಭೆಯ ಬಾವಿಗೆ ಇಳಿದು, ಮೇಜಿನ ಮೇಲೆ ಹತ್ತಿ ಪ್ರತಿಭಟನೆ ನಡೆಸಿದ್ದು, ಈ ವೇಳೆ ಹಾಜರಿ ಬುಕ್ ಸಹ ಹರಿದು ಹಾಕಿದ್ದಾರೆ.
ಇದನ್ನೂ ಓದಿರಿ: ಸಿನಿಮಾ ಚಿತ್ರೀಕರಣದ ವೇಳೆ ಪ್ರಕಾಶ್ ರೈಗೆ ಗಾಯ.. ಶಸ್ತ್ರಚಿಕಿತ್ಸೆಗೊಳಗಾಗಲಿರುವ ನಟ
ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್, ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಅವರಿಗೆ ಇತರ ಸಂಸದರು ಸಾಥ್ ನೀಡಿದರು. ಹೀಗಾಗಿ ಉಪಾಧ್ಯಕ್ಷರು 15 ನಿಮಿಷಗಳ ಕಾಲ ಕಲಾಪ ಮುಂದೂಡಿಕೆ ಮಾಡಿದರು. ಮತ್ತೊಮ್ಮೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ನ ಪ್ರತಾಪ್ ಸಿಂಗ್ ಬಜ್ವಾ ಹಾಗೂ ದಿಪೇಂದ್ರ ಹೂಡಾ ಸದನದಲ್ಲಿ ಗಲಾಟೆ ನಡೆಸಿದರು. ಹೀಗಾಗಿ ಸದನ ಮಧ್ಯಾಹ್ನ 3:03ಕ್ಕೆ ಮುಂದೂಡಿಕೆ ಮಾಡಲಾಯಿತು.
ಕೇಂದ್ರ ಸರ್ಕಾರ ಕಳೆದ ವರ್ಷ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳಿಗೆ ಈ ಹಿಂದಿನಿಂದಲೂ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗುತ್ತಿದ್ದು, ಅನೇಕ ರೈತ ಸಂಘಟನೆಗಳು ಕೂಡ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಿವೆ.