ನವದೆಹಲಿ: ಪ್ರಪಂಚದಾದ್ಯಂತ ಅನೇಕ ದೇಶಗಳು ಬ್ರಹ್ಮೋಸ್ ಕ್ಷಿಪಣಿಯನ್ನು ಖರೀದಿಸಲು ಆಸಕ್ತಿ ತೋರುತ್ತಿದ್ದು, ಈಗಿರುವ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ರಕ್ಷಣಾತ್ಮಕ ಆವೃತ್ತಿಯನ್ನು ಮಾರಾಟ ಮಾಡಲು ರಕ್ಷಣಾ ಇಲಾಖೆ ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು ಈಟಿವಿ ಭಾರತ್ಗೆ ತಿಳಿಸಿವೆ.
ದಕ್ಷಿಣ ಆಫ್ರಿಕಾ, ಆಗ್ನೇಯ ಏಷ್ಯಾದ ಕೆಲವು ರಾಷ್ಟ್ರಗಳು, ದಕ್ಷಿಣ ಅಮೆರಿಕದ ಕೆಲವು ರಾಷ್ಟ್ರಗಳು ಬ್ರಹ್ಮೋಸ್ ಕ್ಷಿಪಣಿಗಾಗಿ ಭಾರತವನ್ನು ಸಂಪರ್ಕಿಸಿವೆ. ಆದರೆ ಭಾರತ ಭೂಮಿಯಿಂದ ಸಮುದ್ರದ ಮೇಲೆ ದಾಳಿ ಮಾಡಬಲ್ಲ ಅಥವಾ ರಕ್ಷಣಾತ್ಮಕ ಆವೃತ್ತಿಯ ಕ್ಷಿಪಣಿಗಳನ್ನು ಮಾತ್ರ ಮಾರಾಟಕ್ಕೆ ಇಡಲಾಗಿದೆ.
ವಿಮಾನ, ಹಡಗು ಅಥವಾ ಜಲಾಂತರ್ಗಾಮಿ ನೌಕೆಯಿಂದ ಉಡಾಯಿಸಬಹುದಾದ ಕ್ಷಿಪಣಿಯೂ ಇದ್ದು, ಕೇವಲ ಭೂಮಿಯಿಂದ ಸಮುದ್ರದ ಮೇಲಿರುವ ಗುರಿಯನ್ನು ರಕ್ಷಣಾತ್ಮಕ ಆವೃತ್ತಿ ತಲುಪುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಭಾರತೀಯ ಸೇನೆಯ ಸಾಹಸ: ಬ್ರಹ್ಮೋಸ್ ಭೂ - ದಾಳಿ ಕ್ಷಿಪಣಿ ಯಶಸ್ವಿ ಪರೀಕ್ಷೆ..!
ಫಿಲಿಪೈನ್ಸ್ ಬ್ರಹ್ಮೋಸ್ ಕ್ಷಿಪಣಿಯ ಮೊದಲ ಗ್ರಾಹಕ ರಾಷ್ಟ್ರವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ನಾವು ವಿವಿಧ ದೇಶಗಳೊಡನೆ ಮಾತುಕತೆ ನಡೆಸುತ್ತಿದ್ದೇವೆ. ಕೊರೊನಾ ಸೋಂಕಿನಿಂದ ಮಾತುಕತೆಗೆ ಸ್ವಲ್ಪ ಹಿನ್ನಡೆಯಾಗಿದೆ. ಫಿಲಿಪೈನ್ಸ್ಗೆ ಕ್ಷಿಪಣಿ ನೀಡುವುದು ಇನ್ನೂ ಅಂತಿಮವಾಗಿಲ್ಲ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಭಾರತ ಮಾರಾಟಕ್ಕೆ ಇಟ್ಟಿರುವ ರಕ್ಷಣಾತ್ಮಕ ಆವೃತ್ತಿಯು ಹಿಮಾಲಯದಂತಹ ಎತ್ತರದ ಪ್ರದೇಶಗಳಲ್ಲೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಭಾರತ-ಚೀನಾ ಸಂಘರ್ಷದ ವೇಳೆ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಸಬಲ್ಲದು ಎಂಬ ಅಂದಾಜು ರಕ್ಷಣಾ ತಜ್ಞರದ್ದಾಗಿದೆ.
ಸರ್ಕಾರದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ರಷ್ಯಾದ ಸರ್ಕಾರಿ ಸ್ವಾಮ್ಯದಲ್ಲಿನ ಕಂಪನಿಯಿಂದ ಬ್ರಹ್ಮೋಸ್ ಕ್ಷಿಪಣಿಯನ್ನು ತಯಾರಿಸಲಾಗುತ್ತಿದ್ದು, ಭಾರತದ ಪಾಲು 50.5ರಷ್ಟಿದೆ. ರಷ್ಯಾದ ಪಾಲು ಶೇಕಡಾ 49.5ರಷ್ಟಿದೆ.