ಮೈನ್ಪುರಿ(ಉತ್ತರ ಪ್ರದೇಶ): ಪ್ರೇಮ ವಿವಾಹ ಮಾಡಿಕೊಂಡಿದ್ದಕ್ಕಾಗಿ ಅಣ್ಣನೋರ್ವ ತನ್ನ ಮಾವನ ಜೊತೆ ಸೇರಿ ಸಹೋದರಿ ಮೇಲೆ ಗುಂಡು ಹಾರಿಸಿದ್ದು, ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಉಳಿದಂತೆ ಯುವತಿಯ ಗಂಡ ಹಾಗೂ ತಾಯಿ ಸಹ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಮೈನ್ಪುರಿಯಲ್ಲಿ ನಡೆದಿರುವ ಈ ಘಟನೆ ತೀವ್ರ ಸಂಚಲನ ಮೂಡಿಸಿದೆ.
ಕಳೆದ ಆರು ತಿಂಗಳ ಹಿಂದೆ ಯುವತಿಯೋರ್ವಳು ಕುಟುಂಬಸ್ಥರ ವಿರೋಧದ ನಡುವೆ ಪ್ರೇಮ ವಿವಾಹ ಮಾಡಿಕೊಂಡಿದ್ದಳು. ಇದರಿಂದ ಆಕ್ರೋಶಗೊಂಡಿರುವ ಅಣ್ಣ ಹಾಡಹಗಲೇ ತನ್ನ ತಂಗಿ, ಆಕೆಯ ಪತಿ ಹಾಗೂ ಅತ್ತೆಯ ಮೇಲೆ ಗುಂಡು ಹಾರಿಸಿದ್ದಾನೆ. ಘಟನೆ ಬೆನ್ನಲ್ಲೇ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಯುವಕ ಹಾಗೂ ಆತನ ತಾಯಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಯುವತಿಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ: 'ನಾನು 2 ತಿಂಗಳ ಗರ್ಭಿಣಿ, ಅಪ್ಪ ನನ್ನನ್ನು ಕೊಲ್ಲಲು ಬಯಸಿದ್ದಾರೆ, ಓಡಿಹೋಗಿ ಮದುವೆಯಾಗಿರುವೆ'
ಭರತ್ವಾಲ್ ನಿವಾಸಿ ಕೋಮಲ್ ತನ್ನ ತಾಯಿ ಹಾಗೂ ಮಾವನ ಒಪ್ಪಿಗೆ ಪಡೆದುಕೊಂಡು ನೆರೆ ಮನೆಯಲ್ಲಿ ವಾಸವಾಗಿದ್ದ ಅನ್ಯ ಜಾತಿಯ ಹುಡುಗನೊಂದಿಗೆ ಏಪ್ರಿಲ್ 20ರಂದು ಪ್ರೇಮ ವಿವಾಹವಾಗಿದ್ದರು. ಇದರಿಂದ ಆಕೆಯ ಸಹೋದರ ಹಾಗೂ ಚಿಕ್ಕಪ್ಪ ಕೋಪಗೊಂಡು, ಈ ಕೃತ್ಯವೆಸಗಿದ್ದಾರೆ. ಘಟನೆ ಬೆನ್ನಲ್ಲೇ ಆರೋಪಿಗಳ ಬಂಧನಕ್ಕಾಗಿ ಮೂರು ತಂಡ ರಚನೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.