ನವದೆಹಲಿ: ಪಶ್ಚಿಮ ದೆಹಲಿಯಲ್ಲಿ ತಿಲಕ್ ನಗರದಲ್ಲಿ ಶಾಲೆಯೊಂದರ ಬಳಿ ವಿದೇಶಿ ಮಹಿಳೆ ಹತ್ಯೆ ಮಾಡಿ ಶವ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಗುರುಪ್ರೀತ್ ಬಂಧಿತ ಆರೋಪಿ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ವಿವರ: ಶುಕ್ರವಾರ (ನಿನ್ನೆ) ತಿಲಕ್ ನಗರ ಪ್ರದೇಶದಲ್ಲಿ ಸ್ವಿಸ್ ಮಹಿಳೆಯ ಶವವನ್ನು ಪೊಲೀಸರು ಪತ್ತೆ ಮಾಡಿದ್ದರು. ಸರ್ಕಾರಿ ಶಾಲೆಯ ಬಳಿ ಕಪ್ಪು ಪ್ಲಾಸ್ಟಿಕ್ ಚೀಲವೊಂದರಲ್ಲಿ ಕೈ ಕಾಲುಗಳನ್ನು ಸರಪಳಿಯಿಂದ ಕಟ್ಟಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದರು.
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅಪರಿಚಿತ ಕಾರಿನಲ್ಲಿ ಬಂದು ಶವ ಎಸೆದು ಹೋಗಿದ್ದು ಕಂಡು ಬಂದಿತ್ತು. ಕಾರನ್ನು ಕಂಡ ಪೊಲೀಸರು ಅದರ ಸಂಖ್ಯೆಯನ್ನು ಪರಿಶೀಲಿಸಿದಾಗ, ಒಂದು ತಿಂಗಳ ಹಿಂದೆ ಖರೀದಿಸಿದ ಸೆಕೆಂಡ್ ಹ್ಯಾಂಡ್ ಕಾರು ಅದು ಎಂಬುದಾಗಿ ತಿಳಿದುಬಂದಿತ್ತು. ಖರೀದಿದಾರರನ್ನು ಪತ್ತೆ ಹಚ್ಚಲು ಯತ್ನಿಸಿದಾಗ ಗುರುಪ್ರೀತ್ ಎಂಬ ವ್ಯಕ್ತಿ ಕಾರು ಖರೀದಿಸಿರುವುದು ಬೆಳಕಿಗೆ ಬಂದಿತ್ತು. ಇಂದು ಕಾರು ವಶಕ್ಕೆ ಪಡೆದ ಪೊಲೀಸರು ಗುರುಪ್ರೀತ್ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಘಟನೆ ಬಗ್ಗೆ ಉಪ ಪೊಲೀಸ್ ಆಯುಕ್ತ ವಿಚಿತ್ರಾ ವೀರ್ ಮಾತನಾಡಿ, ಶುಕ್ರವಾರ ಬೆಳಗ್ಗೆ 8:45ಕ್ಕೆ ಶವ ಪತ್ತೆಯಾದ ಬಗ್ಗೆ ಪೊಲೀಸ್ ಠಾಣೆಗೆ ಕರೆ ಬಂದಿತ್ತು. ಪ್ರಾಥಮಿಕವಾಗಿ, ಇದು ಕೊಲೆ ಪ್ರಕರಣ ಎಂದು ನಾವು ಭಾವಿಸಿದ್ದೇವೆ. ಸೆಕ್ಷನ್ 302 ಮತ್ತು 201 ರ ಅಡಿ ಪ್ರಕರಣವನ್ನು ದಾಖಲಿಸಿ ತನಿಖೆ ಪ್ರಾರಂಭಿಸಿದ್ದೇವೆ. ಸಿಸಿಟಿವಿ ದೃಶ್ಯದಲ್ಲಿ ಶವ ಎಸೆದು ಹೋಗುತ್ತಿದ್ದ ಕಾರನ್ನ ಪತ್ತೆ ಹಚ್ಚಲಾಗಿತ್ತು. ಬಳಿಕ ನಿನ್ನೆ ರಾತ್ರಿ ಗುರುಪ್ರೀತ್ನನ್ನು ಬಂಧಿಸಿದ್ದೇವೆ.
ಆರೋಪಿ ವಿಚಾರಣೆ ವೇಳೆ ನಾಲ್ಕು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಸ್ವಿಸ್ ಮಹಿಳೆಯನ್ನು ಭೇಟಿಯಾಗಿದ್ದಾಗಿ ಆರೋಪಿ ಹೇಳಿದ್ದಾನೆ. ಗುರುಪ್ರೀತ್ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ, ಆಕೆ ಮತ್ತೊಬ್ಬನೊಂದಿಗೆ ಸಂಬಂಧ ಹೊಂದಿದ್ದಳು. ಅದನ್ನು ಸಹಿಸದ ಈತ ಭೇಟಿಯಾಗುವ ನೆಪದಲ್ಲಿ ಸ್ವಿಟ್ಜರ್ಲೆಂಡ್‌ನಿಂದ ಆಕೆಯನ್ನು ಭಾರತಕ್ಕೆ ಕರೆಸಿಕೊಂಡಿದ್ದ. ನಂತರ ಸರ್ಪ್ರೈಸ್ ನೀಡುವುದಾಗಿ ಹೇಳಿ ಆಕೆಯ ಕೈ ಮತ್ತು ಕಾಲುಗಳನ್ನು ಸರಪಳಿಯಿಂದ ಕಟ್ಟಿಹಾಕಿ ಉಸಿರುಗಟ್ಟಿಸಿ ಕೊಂದಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ. ಅಲ್ಲದೇ ಆರೋಪಿಯಿಂದ 1.5 ಕೋಟಿ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಭೀಮಾತಿರದಲ್ಲಿ ಮತ್ತೊಂದು ಭಯಾನಕ ಕೊಲೆ ಪ್ರಕರಣ: ಯುವಕನ ಬರ್ಬರ ಹತ್ಯೆ