ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವ ತನ್ನ ನಿರ್ಧಾರವನ್ನು ಹಿಂಪಡೆಯುವಂತೆ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಭಾರತಕ್ಕೆ ಕೇಳಿದೆ.
ವಿಶ್ವಸಂಸ್ಥೆಯ 76 ನೇ ಸಾಮಾನ್ಯ ಸಭೆಯಲ್ಲಿ ಜಮ್ಮುಕಾಶ್ಮೀರದ ಸ್ಥಾನಮಾನ ರದ್ದುಗೊಳಿಸಿರುವ ವಿಚಾರವನ್ನು ಪ್ರಸ್ತಾಪಿಸಿದ ಇಸ್ಲಾಮಿಕ್ ರಾಷ್ಟ್ರಗಳು, ಭಾರತ ಈ ನಿರ್ಧಾರವನ್ನು ಹಿಂಪಡೆದುಕೊಳ್ಳಬೇಕೆಂದು ಒತ್ತಾಯಿಸಿವೆ.
‘ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ತಲೆ ಹಾಕುವ ಯಾವುದೇ ಅರ್ಹತೆ ಒಐಸಿಗೆ ಇಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಾಗ್ಚಿ ಈ ಹಿಂದೆಯೇ ಹೇಳಿದ್ದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ದುರುಪಯೋಗವನ್ನು ನಿಲ್ಲಿಸಿ. ಆಗಸ್ಟ್ 5, 2019 ರಂದು ಹಾಗೂ ಆ ನಂತರ ತೆಗೆದುಕೊಂಡ ಎಲ್ಲ ನಿರ್ಧಾರಗಳು ಕಾನೂನುಬಾಹಿರ ಮತ್ತು ಏಕಪಕ್ಷೀಯ ಕ್ರಮಗಳನ್ನು ಹಿಂತೆಗೆದುಕೊಳ್ಳುವಂತೆ ಒಐಸಿ ಭಾರತವನ್ನು ಒತ್ತಾಯಿಸಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯಗಳಿಗೆ ಅನುಸಾರವಾಗಿ ಜಮ್ಮು ಮತ್ತು ಕಾಶ್ಮೀರ ವಿವಾದವನ್ನು ನ್ಯಾಯಯುತವಾಗಿ ಬಗೆಹರಿಸದೇ ದಕ್ಷಿಣ ಏಷ್ಯಾದಲ್ಲಿ ಶಾಶ್ವತ ಶಾಂತಿಯನ್ನು ಸಾಧಿಸಲು ಸಾಧ್ಯವಿಲ್ಲ ಎಂದೂ ಅದು ಹೇಳಿದೆ.
ಆಗಸ್ಟ್ 5, 2019 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿತು. ಭಾರತದ ನಿರ್ಧಾರಕ್ಕೆ ಪಾಕ್ ಕೆಂಡಾಮಂಡಲವಾಗಿ, ಪಾಕ್ನಿಂದ ಭಾರತೀಯ ರಾಯಭಾರಿಯನ್ನು ಹೊರ ಹಾಕಿತ್ತು.
ಇದನ್ನೂ ಓದಿ: ವ್ಯಾಪಾರ, ಸಾಂಸ್ಕೃತಿಕ ಒಪ್ಪಂದಗಳ ಬಗ್ಗೆ ಜಪಾನ್ ಪ್ರಧಾನಿಯೊಂದಿಗೆ ಚರ್ಚಿಸಿದ ಪ್ರಧಾನಿ ಮೋದಿ
370 ನೇ ವಿಧಿಯನ್ನು ರದ್ದುಗೊಳಿಸುವುದು ತನ್ನ ಆಂತರಿಕ ವಿಷಯ ಎಂದು ಭಾರತವು ಅಂತಾರಾಷ್ಟ್ರೀಯ ಸಮುದಾಯಕ್ಕೆ ಸ್ಪಷ್ಟವಾಗಿ ಹೇಳಿದೆ. ಭಯೋತ್ಪಾದನೆ, ಹಗೆತನ ಮತ್ತು ಹಿಂಸೆಯಿಲ್ಲದ ಪರಿಸರದಲ್ಲಿ ಇಸ್ಲಾಮಾಬಾದ್‌ನೊಂದಿಗೆ ಸಾಮಾನ್ಯ ನೆರೆಯ ಸಂಬಂಧವನ್ನು ಬಯಸುವುದಾಗಿ ಭಾರತವು ಪಾಕಿಸ್ತಾನಕ್ಕೆ ತಿಳಿಸಿದೆ.