ಭೋಪಾಲ್: ಸದ್ಯ ದೇಶದಲ್ಲಿ ಮಧ್ಯಪ್ರದೇಶವು ಅತಿ ಹೆಚ್ಚು ಸಂಖ್ಯೆಯ ಹುಲಿಗಳನ್ನು ಹೊಂದಿರುವ ರಾಜ್ಯವಾಗಿದ್ದು, ಹುಲಿ ರಾಜ್ಯ ಎಂದು ಖ್ಯಾತಿ ಪಡೆದಿದೆ. ಆದರೆ ರಾಜ್ಯದಲ್ಲಿ ಇತ್ತೀಚೆಗೆ ಹುಲಿಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ "ಟೈಗರ್ ಸ್ಟೇಟ್ ಆಫ್ ಇಂಡಿಯಾ" ಪಟ್ಟವನ್ನು ಉಳಿಸಿಕೊಳ್ಳಲು ರಾಜ್ಯ ಪ್ರಯಾಸ ಪಡುತ್ತಿದೆ. ಮನುಷ್ಯ ಪ್ರಾಣಿ ಸಂಘರ್ಷ ಮತ್ತು ಅದಕ್ಕೆ ಸಂಬಂಧಿಸಿದ ಘಟನೆಗಳ ಕಾರಣದಿಂದ ಹುಲಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ವನ್ಯಜೀವಿ ಪ್ರೇಮಿಗಳು ಆರೋಪಿಸಿದ್ದಾರೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ನೀಡಿದ ಅಂಕಿಅಂಶಗಳ ಪ್ರಕಾರ, ಮಧ್ಯಪ್ರದೇಶವು ಒಂದು ದಶಕದಲ್ಲಿ 270 ಹುಲಿಗಳನ್ನು ಕಳೆದುಕೊಂಡಿದೆ ಮತ್ತು ಕಳೆದ ವರ್ಷ 34 ಹುಲಿಗಳು ಸಾವನ್ನಪ್ಪಿವೆ. ಅಲ್ಲದೆ ಈ ವರ್ಷದ ಮೊದಲ 45 ದಿನಗಳಲ್ಲಿ 9 ಹುಲಿ ಸಾವುಗಳು ವರದಿಯಾಗಿವೆ. 2022 ರ ಡೇಟಾ ಪ್ರಕಾರ ಮಧ್ಯಪ್ರದೇಶದಲ್ಲಿ 526 ಹುಲಿಗಳಿದ್ದವು. ಅದರ ಹತ್ತಿರದ ಪ್ರತಿಸ್ಪರ್ಧಿ ಕರ್ನಾಟಕದಲ್ಲಿ 524 ಹುಲಿಗಳಿವೆ. ಅಧಿಕೃತ ಹುಲಿ ಗಣತಿಯಲ್ಲಿ ಕರ್ನಾಟಕದಲ್ಲಿ ಹೆಚ್ಚು ಹುಲಿಗಳಿರುವುದು ಕಂಡು ಬಂದರೆ ಆ ರಾಜ್ಯಕ್ಕೆ ಹುಲಿ ರಾಜ್ಯದ ಪಟ್ಟ ನೀಡಲಾಗುವುದು. ಕರ್ನಾಟಕದಲ್ಲಿ 2022 ರಲ್ಲಿ 15 ಹುಲಿಗಳು ಸಾವಿಗೀಡಾಗಿವೆ.
ಈಟಿವಿ ಭಾರತ್ ಜೊತೆ ಮಾತನಾಡಿದ ಪ್ರಾಣಿ ಹಕ್ಕುಗಳ ಕಾರ್ಯಕರ್ತ ಅಜಯ್ ದುಬೆ, "ಅರಣ್ಯಗಳಿಗೆ ಹೊಂದಿಕೊಂಡಿರುವ ಕೃಷಿ ಭೂಮಿಯ ವಿದ್ಯುತ್ ಬೇಲಿಗಳಲ್ಲಿ ಹುಲಿಗಳು ಸಿಲುಕಿಕೊಳ್ಳುತ್ತಿವೆ. ಈ ಘಟನೆಗಳನ್ನು ನಿಯಂತ್ರಿಸಲು ಅರಣ್ಯ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಕಳೆದ 10 ವರ್ಷಗಳಲ್ಲಿ 270 ಹುಲಿಗಳು ಸಾವನ್ನಪ್ಪಿದ್ದರೆ, ಕಳೆದ 45 ದಿನಗಳಲ್ಲಿ 9 ಹುಲಿಗಳು ಸಾವನ್ನಪ್ಪಿವೆ. ಹುಲಿಗಳನ್ನು ಉಳಿಸಲು ನಾವು ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ" ಎಂದರು.
ಭಾರತೀಯ ಅರಣ್ಯ ಸೇವೆಯ ನಿವೃತ್ತ ಅಧಿಕಾರಿ ಸುದೇಶ್ ಬಾಗ್ಮಾರೆ ಮಾತನಾಡಿ, "ಅರಣ್ಯ ಪ್ರದೇಶದಲ್ಲಿ ಮಾನವ ಅತಿಕ್ರಮಣದ ಜೊತೆಗೆ, ಹುಲಿ ಹಾಗೂ ಮಾನವ ಸಂಘರ್ಷವೂ ಹುಲಿಗಳ ಸಾವಿಗೆ ಒಂದು ಪ್ರಮುಖ ಕಾರಣವಾಗಿದೆ" ಎಂದರು. ಈ ವರ್ಷದ ಫೆ.4 2023 ರಂದು ಮಧ್ಯಪ್ರದೇಶದಲ್ಲಿ ಎರಡು ಹುಲಿಗಳು ಸಾವಿಗೀಡಾಗಿರುವುದು ಗಮನಾರ್ಹ. ಉಮಾರಿಯಾ ಜಿಲ್ಲೆಯ ಬಾಂಧವ್‌ಗಢ ಹುಲಿ ಸಂರಕ್ಷಿತ ಪ್ರದೇಶದ ಘುಂಗುಟಿ ಅರಣ್ಯ ವ್ಯಾಪ್ತಿಯ ಬಲ್ವಾಯಿ ಬೀಟ್‌ನಲ್ಲಿ ಒಂದು ಹುಲಿಯ ಮೃತದೇಹ ಪತ್ತೆಯಾಗಿದ್ದರೆ, ಮತ್ತೊಂದು ಹುಲಿ ಶಹದೋಲ್‌ನಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ. ಒಂದು ದಿನದ ಹಿಂದೆ ಕನ್ಹಾ ಸಂರಕ್ಷಿತ ಪ್ರದೇಶದಲ್ಲಿ ಹುಲಿಯೊಂದು ಸಾವನ್ನಪ್ಪಿತ್ತು. ಜ.31ರಂದು ಪನ್ನಾ ಹುಲಿ ಸಂರಕ್ಷಿತಾರಣ್ಯದಲ್ಲಿ ಹುಲಿಯ ಮೃತದೇಹ ಪತ್ತೆಯಾಗಿತ್ತು.
ಜ.12ರಂದು ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಶವ ಪತ್ತೆಯಾಗಿತ್ತು. ಅದಕ್ಕೂ ಒಂದು ದಿನ ಮೊದಲು ಸಿಯೋನಿಯಲ್ಲಿ ಹುಲಿಯೊಂದು ಸತ್ತು ಬಿದ್ದಿತ್ತು. ಜನವರಿ 2012 ರಿಂದ ಫೆಬ್ರವರಿ 2023 ರವರೆಗೆ, ರಾಜ್ಯವು 270 ಹುಲಿ ಸಾವುಗಳನ್ನು ದಾಖಲಿಸಿದೆ. ಇದು ಈವರೆಗಿನ ಅತ್ಯಧಿಕ ಹುಲಿ ಸಾವಿನ ಸಂಖ್ಯೆಯಾಗಿದೆ. ಇದೇ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 184, ಕರ್ನಾಟಕದಲ್ಲಿ 150, ಉತ್ತರಾಖಂಡದಲ್ಲಿ 98 ಮತ್ತು ಅಸ್ಸಾಂನಲ್ಲಿ 71 ಹುಲಿಗಳು ಸಾವಿಗೀಡಾಗಿವೆ.
ಇದನ್ನೂ ಓದಿ: ಕೆರೆಯಲ್ಲಿ ಹುಲಿ ಕಳೇಬರ ಪತ್ತೆ: ಮೊದಲೇ ಸೆರೆ ಹಿಡಿಯದಿದ್ದಕ್ಕೆ ಜನರ ಆಕ್ರೋಶ