ಗುವಾಹಟಿ(ಅಸ್ಸೋಂ): ಒಲಿಂಪಿಯನ್ ಬಾಕ್ಸರ್ ಮೇರಿ ಕೋಮ್ ಅವರ ಹುಟ್ಟೂರಾದ ಕೋಮ್ನಲ್ಲಿ ನಾಗಾ ಗ್ರಾಮಸ್ಥರ ಮೇಲೆ ನಡೆದ ದಾಳಿಯ ಸಂಬಂಧ ಈಶಾನ್ಯ ರಾಜ್ಯಗಳ ಅತಿದೊಡ್ಡ ಬಂಡುಕೋರರ ಗುಂಪಾದ ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (ಇಸಾಕ್-ಮುಯಿವಾ) ಅಥವಾ ಎನ್‌ಎಸ್‌ಸಿಎನ್-ಐಎಂ ಮತ್ತೆ ಆಕ್ರೋಶವನ್ನು ವ್ಯಕ್ತಪಡಿಸಿದೆ. ಮಣಿಪುರದಲ್ಲಿ ನಾಗಾಗಳಿಗೆ ಕಿರುಕುಳ ನೀಡದಂತೆ ಕುಕಿ ಉಗ್ರರಿಗೆ ಎಚ್ಚರಿಕೆ ನೀಡಿದೆ.
ಈ ಬಂಡುಕೋರರ ಸಂಘಟನೆಯು ಮಣಿಪುರದ ವಿವಿಧ ಅಲ್ಪಸಂಖ್ಯಾತ ಬುಡಕಟ್ಟುಗಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಮಣಿಪುರದಲ್ಲಿ ಮೈಟೀಸ್ ಮತ್ತು ಕುಕಿಗಳ ನಡುವೆ ಇತ್ತೀಚೆಗೆ ನಡೆದ ಘರ್ಷಣೆ ಅಮಾನವೀಯ ಮತ್ತು ಅಸಹ್ಯಕರ ಎಂದು ಎನ್‌ಎಸ್‌ಸಿಎನ್ ತಿಳಿಸಿದೆ. ಐಮೋಲ್, ಚಿರು, ಚೋಥೆ, ಖರಮ್, ಕೊಯಿರೆಂಗ್ ಮತ್ತು ಕೋಮ್ ನಂತಹ ನಾಗಾ ಬುಡಕಟ್ಟು ಜನಾಂಗದವರ ರಕ್ಷಣೆಗೆ ಈ ಎನ್‌ಎಸ್‌ಸಿಎನ್ ಸಂಘಟನೆ ಕರೆ ನೀಡಿದೆ.
"ನಮ್ಮ ಮೈಟಿ ಸಹೋದರರು ಮತ್ತು ಕುಕಿಗಳು ಅವರನ್ನು ಬೇರೆ ರೀತಿಯಲ್ಲಿ ಕರೆದುಕೊಂಡು ಹೋಗಬಾರದು ಮತ್ತು ಅವರಿಗೆ ಯಾವುದೇ ರೀತಿಯಲ್ಲಿ ಕಿರುಕುಳ ನೀಡಬಾರದು" ಎಂದು ಹೇಳಿದೆ. ಕೋಮ್ ಗ್ರಾಮ ಮತ್ತು ಕಂಗತೇಯ್ ಗ್ರಾಮದ ಮೇಲೆ ಕುಕಿ ಉಗ್ರಗಾಮಿಗಳು ದಾಳಿ ನಡೆಸಿ, ಕಂಗತೇಯ್ ಗ್ರಾಮವನ್ನು ಗ್ರಾಮಸ್ಥರು ಖಾಲಿ ಮಾಡುವಂತೆ ಒತ್ತಾಯಿಸಿರುವುದು ವಿಷಾದದ ಸಂಗತಿಯಾಗಿದೆ ಎಂದು ಎನ್‌ಎಸ್‌ಸಿಎನ್ ಹೇಳಿದೆ. ಭಾರತದ ವಿಶ್ವ ಚಾಂಪಿಯನ್ ಬಾಕ್ಸರ್ ಮೇರಿ ಕೋಮ್ ಕೂಡ ಮಣಿಪುರದ ಇದೇ ಬುಡಕಟ್ಟಿಗೆ ಸೇರಿದವರಾಗಿದ್ದಾರೆ.
ಕೋಮ್ ಗ್ರಾಮದಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿದ ಬಂಡುಕೋರರ ಗುಂಪು, "ಇಂತಹ ಕ್ರೂರ ಹಿಂಸಾಚಾರದ ಪರಿಸ್ಥಿತಿ ಉಲ್ಬಣಿಸಿದಾಗ, ಮಾನವೀಯತೆ ಮತ್ತು ಶಾಂತಿಯುತ ಸಹಬಾಳ್ವೆಗಾಗಿ ಇದನ್ನು ತಕ್ಷಣವೇ ನಿಲ್ಲಿಸಬೇಕು" ಎಂದು ಹೇಳಿದೆ. "ಪ್ರಾರ್ಥನಾ ಸ್ಥಳಗಳನ್ನು (ಚರ್ಚುಗಳು) ಸುಡುವುದು ಧಾರ್ಮಿಕ ಆಧಾರದ ಮೇಲೆ ಮಾಡಿದ ಪವಿತ್ರ ಕೃತ್ಯ ಎಂಬಂತೆ ಪರಿಗಣಿಸಲಾಗಿದೆ" ಎಂದು ಎನ್‌ಎಸ್‌ಸಿಎನ್ ಬಂಡುಕೋರರ ಗುಂಪು ತನ್ನ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
ನಾಗಾ ಸಮುದಾಯದ ಭಾಗವೆಂದು ಪರಿಗಣಿಸುವ ರಾಜ್ಯದ ವಿವಿಧ ನಾಗಾ ಬುಡಕಟ್ಟುಗಳ ರಕ್ಷಣೆಗೆ ಕರೆ ನೀಡಿದೆ. ಇದು ನಾಗಾಗಳ ರಾಜಕೀಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. NSCN-IM ಪ್ರಸ್ತುತ ಕೇಂದ್ರ ಸರ್ಕಾರದೊಂದಿಗೆ ನಿರ್ಣಾಯಕ ಮಾತುಕತೆಗಳನ್ನು ನಡೆಸುತ್ತಿದೆ ಮತ್ತು ನಾಗಾ ಶಾಂತಿ ಒಪ್ಪಂದವನ್ನು ಅಂತಿಮಗೊಳಿಸಲು 2015 ರಲ್ಲಿ ಫ್ರೇಮ್‌ವರ್ಕ್ ಒಪ್ಪಂದಕ್ಕೆ ಸಹಿ ಹಾಕಿತ್ತು.
ಇದನ್ನೂ ಓದಿ:ಲೂಧಿಯಾನ ಎಸ್‌ಎಸ್‌ಪಿ ಕಚೇರಿಯಲ್ಲಿ ಅಹಿತಕರ ಘಟನೆ: ಡಿಎಸ್‌ಪಿ ಅವರ ಗನ್‌ಮ್ಯಾನ್ ಬುಲೆಟ್ ಗಾಯದಿಂದ ಸಾವು
ಮಣಿಪುರ ಚುನಾವಣಾ ರಾಜಕೀಯದಲ್ಲಿ ಕುಕಿ ಸಮುದಾಯ ಪ್ರಭಾವಶಾಲಿಯಾಗಿದೆ ಎಂದಿರುವ ಒನಿಮ್, ಕುಕಿಗಳು ಬೇರೆ ದೇಶದಿಂದ ಇಲ್ಲಿಗೆ ವಲಸೆ ಬಂದಿದ್ದು, ತಮ್ಮನ್ನು ತಾವು ಇಲ್ಲಿನ ಮತದಾರರು ಎಂದು ಗುರುತಿಸಿಕೊಂಡಿದ್ದಾರೆ. ಅಲ್ಲದೇ ಇದೀಗ ಅವರು ಇಲ್ಲಿ ಇತರ ಜನಾಂಗದವರ ಮೇಲೆ ತಮ್ಮ ಪ್ರಾಬಲ್ಯವನ್ನು ಸಾಧಿಸಲು ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಈ ನಿರ್ದಿಷ್ಟ ಸಮುದಾಯದ ಮಂದಿಯನ್ನು ಗುರಿ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.