ನವದೆಹಲಿ: ಭಾರತೀಯ ಕರಾವಳಿ ರಕ್ಷಣಾ ಪಡೆ (ಐಸಿಜಿ) ಹಡಗು 'ಸಜಾಗ್' ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಚಾಲನೆ ನೀಡಿದ್ದಾರೆ.
ಐಸಿಜಿಯ ಪ್ರಕಾರ, 105 ಮೀ ಆಫ್‌ಶೋರ್ ಪೆಟ್ರೋಲ್ ಹಡಗುಗಳ (ಒಪಿವಿ) ಸರಣಿಯಲ್ಲಿ ಮೂರನೆಯದು ಸಜಾಗ್. ಸಜಾಗ್ ಎಂದರೆ ರಾಷ್ಟ್ರದ ಕಡಲ ಹಿತಾಸಕ್ತಿಗೆ ಸದಾ ಸಿದ್ಧ ಎಂದು.
ಈ ಅತ್ಯಾಧುನಿಕ ಹಡಗನ್ನು ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ ವಿನ್ಯಾಸಗೊಳಿಸಿದೆ. ಸುಧಾರಿತ ತಂತ್ರಜ್ಞಾನ, ಸಂವಹನ ಸಾಧನಗಳು, ಸಂವೇದಕಗಳು ಮತ್ತು ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ ಎಂದು ಐಸಿಜಿ ಹೇಳಿದೆ.
ಹಡಗಿನಲ್ಲಿ 40/60 ಬೋಫೋರ್ಸ್ ಗನ್ ಮತ್ತು ಎಫ್‌ಸಿಎಸ್‌ನೊಂದಿಗೆ ಎರಡು 12.7 MM ಎಸ್‌ಆರ್‌ಸಿಜಿ ಗನ್‌ಗಳನ್ನು ಅಳವಡಿಸಲಾಗಿದೆ. ಇಂಟಿಗ್ರೇಟೆಡ್ ಬ್ರಿಡ್ಜ್ ಸಿಸ್ಟಮ್ (ಐಬಿಎಸ್), ಇಂಟಿಗ್ರೇಟೆಡ್ ಪ್ಲಾಟ್‌ಫಾರ್ಮ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಐಪಿಎಂಎಸ್), ಪವರ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಪಿಎಂಎಸ್) ಮತ್ತು ಹೈ ಪವರ್ ಬಾಹ್ಯ ಅಗ್ನಿಶಾಮಕ (ಇಎಫ್‌ಎಫ್) ವ್ಯವಸ್ಥೆಯನ್ನು ಸಹ ಈ ಹಡಗು ಹೊಂದಿದೆ.
ಸಜಾಗ್ ನೇತೃತ್ವವನ್ನು ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ ಸಂಜಯ್ ನೇಗಿ ವಹಿಸಿಕೊಂಡಿದ್ದು, 12 ಮಂದಿ ಅಧಿಕಾರಿಗಳು ಮತ್ತು 99 ಇತರ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ.
ಭಾರತೀಯ ಕೋಸ್ಟ್ ಗಾರ್ಡ್ ಪ್ರಸ್ತುತ, 157 ಹಡಗುಗಳು ಮತ್ತು 62 ವಿಮಾನಗಳನ್ನು ಹೊಂದಿದೆ. 16 ಅಡ್ವಾನ್ಸ್ ಲೈಟ್ ಹೆಲಿಕಾಪ್ಟರ್‌ಗಳನ್ನು ಬೆಂಗಳೂರಿನ ಎಚ್‌ಎಎಲ್‌ನಲ್ಲಿ ತಯಾರಿಸಲಾಗುತ್ತಿದೆ.