ನವದೆಹಲಿ: ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA)ಗೆ ಸೇರ್ಪಡೆಯಾಗಲು ಮಹಿಳೆಯರಿಗೂ ಅವಕಾಶ ನೀಡಲಾಗಿದ್ದು, ಪ್ರವೇಶ ಪರೀಕ್ಷೆಯ ಅಧಿಸೂಚನೆಯನ್ನು ಮೇ 2022 ರೊಳಗೆ ಯುಪಿಎಸ್‌ಸಿ ಮೂಲಕ ಪ್ರಕಟಿಸುವುದಾಗಿ ಕೇಂದ್ರ ರಕ್ಷಣಾ ಸಚಿವಾಲಯವು ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
ಸದ್ಯಕ್ಕೆ ಮಹಿಳೆಯರಿಗಾಗಿ ವೈದ್ಯಕೀಯ ಮಾನದಂಡಗಳು ಜಾರಿಯಲ್ಲಿಲ್ಲ. ಇದನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು. ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಯ ಡೈರೆಕ್ಟರೇಟ್ ಜನರಲ್ ಹಾಗೂ ತಜ್ಞರನ್ನು ಒಳಗೊಂಡ ತಂಡವು ಈ ಪ್ರಕ್ರಿಯೆಯನ್ನು ಕೈಗೊಳ್ಳುತ್ತದೆ ಎಂದು ರಕ್ಷಣಾ ಸಚಿವಾಲಯ ಅಫಿಡವಿಟ್ ಸಲ್ಲಿಸಿದೆ.
ಪೂರ್ವ ತರಬೇತಿ ಅಕಾಡೆಮಿಗಳಲ್ಲಿ ಮಹಿಳಾ ಕೆಡೆಟ್‌ಗಳ ತರಬೇತಿಗೆ ಸಂಬಂಧಿಸಿದಂತೆ ಮೂಲಸೌಕರ್ಯಗಳಲ್ಲಿ ಬದಲಾವಣೆ ಆಗಬೇಕಿದೆ. ಅವರಿಗೆ ಕೇವಲ ವಸತಿಗೃಹ ಮಾತ್ರವಲ್ಲದೇ ನೈರ್ಮಲ್ಯ, ಭದ್ರತೆ ಮತ್ತು ಗೌಪ್ಯತೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಬೇಕಿದೆ. ಅಷ್ಟೇ ಅಲ್ಲ ಸ್ತ್ರೀರೋಗತಜ್ಞರು, ಕ್ರೀಡಾ ಔಷಧ ತಜ್ಞರು, ಶುಶ್ರೂಷಾ ಸಿಬ್ಬಂದಿ, ಪರಿಚಾರಕರನ್ನು ಕೂಡ ಮಿಲಿಟರಿ ಆಸ್ಪತ್ರೆಯಲ್ಲಿ ನಿಯೋಜಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾವು ಕಾರ್ಯ ಪ್ರವೃತ್ತರಾಗಿ ಮುಂದಿನ ವರ್ಷದ ಮೊದಲಾರ್ಧದಲ್ಲಿ ಪ್ರವೇಶ ಪರೀಕ್ಷೆಯ ಅಧಿಸೂಚನೆಯನ್ನು ಹೊರಡಿಸುತ್ತೇವೆ ಎಂದು ಅಫಿಡವಿಟ್ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಎನ್‌ಡಿಎ ಮೂಲಕ ಸಶಸ್ತ್ರ ಪಡೆಗೆ ಮಹಿಳೆಯರಿಗೆ ಅವಕಾಶ: ಸುಪ್ರೀಂಗೆ ಕೇಂದ್ರ ಸರ್ಕಾರ ಮಾಹಿತಿ
ರಕ್ಷಣಾ ಪಡೆಗಳಲ್ಲಿ ಮಹಿಳೆಯರ ಕಾಯಂ ನೇಮಕಾತಿಗೆ ಅವಕಾಶ ನೀಡುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ಸೆಪ್ಟೆಂಬರ್ 5 ರಂದು ಪ್ರವೇಶ ಪರೀಕ್ಷೆ ನಿಗದಿ ಪಡಿಸಿತ್ತು. ಆದರೆ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಬಳಿಕ ಕುಶ್ ಕಲ್ರಾ ಎಂಬ ವಕೀಲರು ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಮಹಿಳೆಯರನ್ನು ಸೇರಿಸದಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಪ್ರತಿಕ್ರಿಯೆಯಾಗಿ ಇಂದು ರಕ್ಷಣಾ ಸಚಿವಾಲಯ ಅಫಿಡವಿಟ್ ಸಲ್ಲಿಸಿದೆ.