ನವದೆಹಲಿ: ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್) ಅಂಡರ್-17 ಮಹಿಳಾ ತಂಡದ ಸಹಾಯಕ ಕೋಚ್ ಅಲೆಕ್ಸ್ ಆಂಬ್ರೋಸ್ ಅವರನ್ನು ಅಂಡರ್-17 ಮಹಿಳಾ ವಿಶ್ವಕಪ್‌ಗೂ ಮುನ್ನ ತಾತ್ಕಾಲಿಕವಾಗಿ ಅಮಾನತುಗೊಳಿಸಿರುವ ವಿಚಾರ ಗೊತ್ತಿದೆ. ಯುರೋಪ್‌ನಲ್ಲಿ ಫುಟ್ಬಾಲ್ ತಂಡದ ಬಾಲಕಿಯರ ಟ್ರಿಪ್‌ನಲ್ಲಿ ಅನುಚಿತ ವರ್ತನೆ ಆರೋಪ ಹಿನ್ನೆಲೆ ತಾತ್ಕಾಲಿಕವಾಗಿ ಅಮಾನತುಗೊಳಿಸಿ ತನಿಖೆಗೆ ಒಳಗಾಗುವಂತೆ ಎಐಎಫ್‌ಎಫ್ ಸೂಚಿಸಿತ್ತು. ಈಗ ಮಾಜಿ ಕೋಚ್ ಅಲೆಕ್ಸ್ ಆಂಬ್ರೋಸ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ.
ಅಲೆಕ್ಸ್ ಆಂಬ್ರೋಸ್ ಅವರು ಭಾರತ ಅಂಡರ್-17 ಮಹಿಳಾ ತಂಡದ ಕೋಚ್ ಆಗಿದ್ದರು. ಅವರ ವಿರುದ್ಧ ದ್ವಾರಕಾ ಸೆಕ್ಟರ್ 23 ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯ ಸೆಕ್ಷನ್ 12 (ಲೈಂಗಿಕ ಕಿರುಕುಳಕ್ಕಾಗಿ ಶಿಕ್ಷೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆಂಬ್ರೋಸ್ ತಂಡದ ನಾರ್ವೆ ಪ್ರವಾಸದ ಸಮಯದಲ್ಲಿ ಅಪ್ರಾಪ್ತ ಆಟಗಾರರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ದೆಹಲಿ ನ್ಯಾಯಾಲಯವು ಆಂಬ್ರೋಸ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದ್ದು, ಈ ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 25ಕ್ಕೆ ಮುಂದೂಡಲಾಗಿದೆ.
ಜೂನ್ 2022 ರಲ್ಲಿ ಅಂಡರ್-17 ಫುಟ್‌ಬಾಲ್ ತಂಡದ ನಾರ್ವೆ ಪ್ರವಾಸದ ಸಮಯದಲ್ಲಿ ಅಲೆಕ್ಸ್ ಆಂಬ್ರೋಸ್ ಮೇಲೆ ಅಪ್ರಾಪ್ತ ವಯಸ್ಕರ ಜೊತೆ ಅನುಚಿತ ವರ್ತನೆ ಆರೋಪ ಹೊರಿಸಲಾಗಿತ್ತು. ಬಳಿಕ ಅವರನ್ನು ಕೋಚ್ ಸ್ಥಾನದಿಂದ ವಜಾಗೊಳಿಸಿ ಪ್ರಕರಣ ದಾಖಲಿಸಲಾಗಿತ್ತು. ಈಗ ಈ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು CrPC ಯ ಸೆಕ್ಷನ್ 70 ರ ಅಡಿಯಲ್ಲಿ ವಾರಂಟ್ ಹೊರಡಿಸಿದೆ.
ಆಂಬ್ರೋಸ್ ಸದ್ಯ ಗೋವಾದಲ್ಲಿ ನೆಲೆಸಿದ್ದಾರೆ. ಹೀಗಾಗಿ ವಕೀಲರ ಮೂಲಕ ಆಂಬ್ರೋಸ್ ತಮ್ಮ ಪ್ರಕರಣ ದೆಹಲಿಯಲ್ಲಿರುವುದರಿಂದ ವಿಚಾರಣೆಗೆ ಹಾಜರಾಗುವುದಕ್ಕೆ ವಿನಾಯಿತಿ ನೀಡುವಂತೆ ಕೋರಿದ್ದರು. ಅಷ್ಟೇ ಅಲ್ಲ ಶುಕ್ರವಾರದ ವಿಚಾರಣೆ ವೇಳೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಜಾಮೀನಿಗೆ ವಿಧಿಸಿರುವ ಷರತ್ತುಗಳನ್ನು ಪಾಲಿಸದ ಶ್ಯೂರಿಟಿಗೆ ನೋಟಿಸ್ ಸಹ ಜಾರಿ ಮಾಡಿದ್ದಾರೆ.
ಇದನ್ನೂ ಓದಿ: ಪ್ರಧಾನಿ ವಿರುದ್ಧ ಹೇಳಿಕೆ ಸಂಬಂಧ ಹಕ್ಕುಚ್ಯುತಿ ನೋಟಿಸ್: ಫೆಬ್ರವರಿ 15ರೊಳಗೆ ಉತ್ತರಿಸುವಂತೆ ರಾಹುಲ್ಗೆ ಸೂಚನೆ