ಜಮ್ಮು: ಕಾಂಗ್ರೆಸ್‌ನಲ್ಲಿರುವಂತೆ ತಮ್ಮ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇರಬಾರದು ಮತ್ತು ಪಕ್ಷದಲ್ಲಿ ಅರ್ಹತೆ ಮತ್ತು ಟೀಮ್‌ವರ್ಕ್ ಸಂಸ್ಕೃತಿಯನ್ನು ಉತ್ತೇಜಿಸುವ ಅಗತ್ಯವಿದೆ ಎಂದು ಡೆಮಾಕ್ರಟಿಕ್ ಆಜಾದ್ ಪಾರ್ಟಿ (ಡಿಎಪಿ) ಅಧ್ಯಕ್ಷ ಗುಲಾಂ ನಬಿ ಆಜಾದ್ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಆಜಾದ್ ಅವರು ಕಾಂಗ್ರೆಸ್‌ನೊಂದಿಗಿನ ಐದು ದಶಕಗಳ ಸುದೀರ್ಘ ಸಂಬಂಧವನ್ನು ಕೊನೆಗೊಳಿಸಿದ ನಂತರ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತಾವು ಸ್ಥಾಪಿಸಿದ ಪಕ್ಷದ ಹೊಸದಾಗಿ ನೇಮಕಗೊಂಡ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಮೊದಲ ಸಭೆಯನ್ನು ಉದ್ದೇಶಿಸಿ ಶನಿವಾರ ಮಾತನಾಡುತ್ತಿದ್ದರು.
ಕಾಂಗ್ರೆಸ್‌ನಂತೆ ನಮ್ಮ ಪಕ್ಷದಲ್ಲಿ ಗುಂಪುಗಾರಿಕೆ ಇರಲು ಸಾಧ್ಯವಿಲ್ಲ. ನಾವು ಅರ್ಹತೆ, ಮೆಚ್ಚುಗೆ ಮತ್ತು ಟೀಮ್‌ವರ್ಕ್ ಸಂಸ್ಕೃತಿಯನ್ನು ಉತ್ತೇಜಿಸಬೇಕಾಗಿದೆ ಎಂದು ಅವರು ಹೇಳಿದರು. ಸ್ವಜನಪಕ್ಷಪಾತ ಮತ್ತು ಗುಂಪುಗಾರಿಕೆಯ ಸಂಸ್ಕೃತಿ ಸ್ವೀಕಾರಾರ್ಹವಲ್ಲ ಎಂದು ಅವರು ಒತ್ತಿ ಹೇಳಿದರು. ಪಕ್ಷದ ಪ್ರಮುಖ ಕಾರ್ಯಸೂಚಿಯನ್ನು ಉತ್ತೇಜಿಸುವಂತೆ ಮತ್ತು ತಳಮಟ್ಟದ ಸಾರ್ವಜನಿಕರನ್ನು ತಲುಪುವಂತೆ ಆಜಾದ್ ಪಕ್ಷದ ಸದಸ್ಯರಿಗೆ ನಿರ್ದೇಶನ ನೀಡಿದರು.
ಶಾಂತಿ ಮತ್ತು ಅಭಿವೃದ್ಧಿಯ ನಮ್ಮ ಕಾರ್ಯಸೂಚಿಯು ಕೇಂದ್ರಾಡಳಿತ ಪ್ರದೇಶದ ಪ್ರತಿಯೊಬ್ಬ ವ್ಯಕ್ತಿಯನ್ನು ತಲುಪಬೇಕು. ನಮ್ಮ ಕಾರ್ಯಕರ್ತರು ನಮ್ಮ ಸಿದ್ಧಾಂತ ಮತ್ತು ಕಾರ್ಯಸೂಚಿಯ ಬಗ್ಗೆ ಅರ್ಥಮಾಡಿಕೊಳ್ಳಬೇಕು. ನಾವು ತಳಮಟ್ಟದಲ್ಲಿ ಜನರೊಂದಿಗೆ ತೊಡಗಿಸಿಕೊಳ್ಳಬೇಕು ಮತ್ತು ಅವರ ಸಮಸ್ಯೆಗಳನ್ನು ಎತ್ತಿ ತೋರಿಸಬೇಕು ಎಂದು ಅವರು ಹೇಳಿದರು. ಆದಾಗ್ಯೂ, ಭೂಹಕ್ಕು, ಉದ್ಯೋಗಗಳು ಮತ್ತು ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸುವುದು ಡೆಮಾಕ್ರಟಿಕ್ ಆಜಾದ್ ಪಾರ್ಟಿಯ ಪ್ರಾಥಮಿಕ ಆದ್ಯತೆಗಳಾಗಿವೆ ಎಂದು ಆಜಾದ್ ಹೇಳಿದರು.
ಜನವರಿ 9 ರಂದು ಹೊರಡಿಸಿದ ಸುತ್ತೋಲೆಯಲ್ಲಿ, ಕಂದಾಯ ಇಲಾಖೆಯ ಆಯುಕ್ತ ಕಾರ್ಯದರ್ಶಿ ವಿಜಯ್ ಕುಮಾರ್ ಬಿಧುರಿ ಅವರು ಜನವರಿ ಅಂತ್ಯದೊಳಗೆ ರೋಶನಿ ಮತ್ತು ಕಹಚರೈ ಸೇರಿದಂತೆ ರಾಜ್ಯದಲ್ಲಿ ಶೇ 100 ರಷ್ಟು ಒತ್ತುವರಿಯನ್ನು ತೆರವು ಮಾಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಆದೇಶ ದುರದೃಷ್ಟಕರ ಎಂದು ಬಣ್ಣಿಸಿದ ಆಜಾದ್ ಅವರು ಮುಖ್ಯಮಂತ್ರಿಯಾಗಿ ರೋಶನಿ ಯೋಜನೆಯಡಿ ಬಡವರು, ನಿರ್ಗತಿಕರು ಮತ್ತು ನಿವೇಶನ ರಹಿತರಿಗೆ ಮನೆ ನಿರ್ಮಿಸಲು ಮತ್ತು ಸಾಗುವಳಿ ಮಾಡಲು ಭೂಮಿಯನ್ನು ಒದಗಿಸಲಾಗಿದೆ. ಆದರೆ ಈಗ ಚಾಲ್ತಿಯಲ್ಲಿರುವ ಆಡಳಿತವು ಅದನ್ನು ಕಿತ್ತುಕೊಳ್ಳುತ್ತಿದೆ. ಅದರಲ್ಲೂ ಇಂಥ ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿ ಹೀಗೆ ಮಾಡಲಾಗುತ್ತಿದೆ ಎಂದು ಹೇಳಿದರು.
ಜಮ್ಮು ಕಾಶ್ಮೀರದ ಜನರು ಅದರ ಸಂಪನ್ಮೂಲಗಳ ಮೊದಲ ಫಲಾನುಭವಿಗಳು. ಅದು ಉದ್ಯೋಗವಾಗಲಿ ಅಥವಾ ಭೂಮಿಯಾಗಲಿ, ಜಮ್ಮು ಮತ್ತು ಕಾಶ್ಮೀರದ ಜನರಿಗೆ ಅದರ ಮೇಲೆ ಮೊದಲ ಹಕ್ಕಿದೆ. ಸರ್ಕಾರ ಅದನ್ನು ಅರ್ಥಮಾಡಿಕೊಂಡು ಬಡವರು ಮತ್ತು ಭೂರಹಿತರನ್ನು ಉಳಿಸಬೇಕು ಎಂದು ಆಜಾದ್ ಹೇಳಿದರು.
ಬಂಡಾಯ ಸ್ಫೋಟ: ಗುಲಾಂ ನಬಿ ಆಜಾದ್ ಸ್ಥಾಪಿಸಿರುವ ಡೆಮಾಕ್ರಟಿಕ್ ಆಜಾದ್ ಪಾರ್ಟಿಯಲ್ಲಿ (ಡಿಎಪಿ) ಹಠಾತ್ ಬಂಡಾಯ ಸ್ಫೋಟಗೊಂಡಿದ್ದು, ಹಲವಾರು ನಾಯಕರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಿದ್ದಾರೆ. 370 ನೇ ವಿಧಿ ಮತ್ತು ಜಮ್ಮು ಮತ್ತು ಕಾಶ್ಮೀರ ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ಬಗ್ಗೆ ದೃಢವಾದ ನಿಲುವನ್ನು ತೆಗೆದುಕೊಳ್ಳುವಲ್ಲಿ ಡೆಮಾಕ್ರಟಿಕ್ ಆಜಾದ್ ಪಾರ್ಟಿ (ಡಿಎಪಿ) ಅಧ್ಯಕ್ಷ ಗುಲಾಂ ನಬಿ ಆಜಾದ್ ವಿಫಲರಾಗಿದ್ದರಿಂದಲೇ ಈ ರೀತಿ ನಾಯಕರು ಪಕ್ಷ ತೊರೆಯುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ತೆಲುಗು ರಾಜ್ಯಗಳ ಸಂಧಿಸುವ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ