ಹೈದರಾಬಾದ್: ಬಿಆರ್‌ಎಸ್ ಎಂದರೆ 'ಬಿಜೆಪಿ ರಿಸ್ತೇದಾರ್ ಸಮಿತಿ' (ಬಿಜೆಪಿ ಸಂಬಂಧಿ ಸಮಿತಿ). ಪ್ರತಿಪಕ್ಷಗಳ ನಾಯಕರ ಮೇಲೆ ತನಿಖಾ ಸಂಸ್ಥೆಗಳಿಂದ ದಾಳಿ ನಡೆಸುತ್ತಾರೆ. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮತ್ತು ಎಐಎಂಐಎಂ ನಾಯಕರ ವಿರುದ್ಧ ಯಾವುದೇ ಪ್ರಕರಣಗಳಿಲ್ಲ. ಏಕೆಂದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನೆಲ್ಲಾ ತಮ್ಮವರೆಂದು ಪರಿಗಣಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಪಾದಿಸಿದರು.
ಕಾಂಗ್ರೆಸ್ ಬೃಹತ್ ರ್ಯಾಲಿಯಲ್ಲಿ ತೆಲಂಗಾಣದಲ್ಲಿ ಆಡಳಿತ ನಡೆಸುತ್ತಿರುವ ಬಿಆರ್‌ಎಸ್ ವಿರುದ್ಧ ಟೀಕಾಪ್ರಹಾರ ನಡೆಸಿದ ರಾಹುಲ್, ಕಾಂಗ್ರೆಸ್ ಕೇವಲ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ವಿರುದ್ಧ ಹೋರಾಡುತ್ತಿಲ್ಲ. ಬಿಜೆಪಿ ಮತ್ತು ಸಂಸದ ಅಸಾದುದ್ದೀನ್ ಓವೈಸಿಯ ಎಐಎಂಐಎಂ ವಿರುದ್ಧವೂ ಹೋರಾಟ ನಡೆಸಲಿದೆ. ಎಐಎಂಐಎಂ ಮತ್ತು ಬಿಆರ್‌ಎಸ್ ಪ್ರತ್ಯೇಕ ಪಕ್ಷಗಳಾಗಿದ್ದರೂ, ಒಟ್ಟಾಗಿ ಕೆಲಸ ಮಾಡುತ್ತಿವೆ. ಲೋಕಸಭೆಯಲ್ಲಿ ಬಿಜೆಪಿಗೆ ಅಗತ್ಯವಿದ್ದಾಗ ಬಿಆರ್‌ಎಸ್ ಸಂಸದರು ನೆರವಿಗೆ ಬಂದಿದ್ದಾರೆ. ಕೃಷಿ ಕಾಯ್ದೆಗಳು, ಜಿಎಸ್‌ಟಿ ಮತ್ತು ರಾಷ್ಟ್ರಪತಿ ಮತ್ತು ಉಪಾಧ್ಯಕ್ಷರ ಚುನಾವಣೆಗಳಲ್ಲಿ ಬಿಜೆಪಿಗೆ ಬಿಆರ್‌ಎಸ್ ಬೆಂಬಲ ನೀಡಿದೆ. ಹೀಗಾಗಿ ಅವರೆಲ್ಲರೂ ಮಿತ್ರರು ಎಂದು ದೂರಿದರು.
ತೆಲಂಗಾಣದಲ್ಲಿ ಕಾಂಗ್ರೆಸ್ ನಡೆಸಲು ಉದ್ದೇಶಿಸಿದ್ದ ಕಾರ್ಯಕ್ರಮಗಳನ್ನು ನಿಲ್ಲಿಸಲು ಪ್ರಯತ್ನಿದರು. ಅದ್ಯಾವುದೂ ಸಾಧ್ಯವಾಗಿಲ್ಲ. ಬಿಆರ್‌ಎಸ್, ಬಿಜೆಪಿ, ಎಐಎಂಐಎಂ ಪಕ್ಷಗಳು ನಮ್ಮ ಸಭೆಗಳಿಗೆ ಅಡ್ಡಿಪಡಿಸಿದಾಗ್ಯೂ ಸಭೆ ನಡೆಸಿದ್ದೇವೆ. ಎಷ್ಟೇ ಅಡ್ಡಿಗಳ ಮಧ್ಯೆ ನಮ್ಮ ಪಕ್ಷ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ರಾಹುಲ್ ವಿಶ್ವಾಸ ವ್ಯಕ್ತಪಡಿಸಿದರು.
ಈ ನಾಯಕರ ಮೇಲೆ ಕೇಸಿಲ್ಲ: ಪ್ರತಿ ವಿರೋಧ ಪಕ್ಷದ ನಾಯಕರ ವಿರುದ್ಧ ಪ್ರಕರಣಗಳಿವೆ. ಜಾರಿ ನಿರ್ದೇಶನಾಲಯ, ಕೇಂದ್ರೀಯ ತನಿಖಾ ದಳ ಮತ್ತು ಆದಾಯ ತೆರಿಗೆ ಇಲಾಖೆಯಂತಹ ತನಿಖಾ ಸಂಸ್ಥೆಗಳು ದಾಳಿ ಮಾಡಿ ಕೇಸ್ ಹಾಕಿವೆ. ಆದರೆ, ಸಿಎಂ ಕೆಸಿಆರ್ ವಿರುದ್ಧ ಯಾವುದೇ ಪ್ರಕರಣವಿಲ್ಲ. ಎಐಎಂಐಎಂ ವಿರುದ್ಧ ಯಾವುದೇ ಕೇಸಿಲ್ಲ. ಇತರ ಪ್ರತಿಪಕ್ಷಗಳ ಮೇಲೆ ಮಾತ್ರ ದಾಳಿ ಮಾಡಲಾಗುತ್ತದೆ. ಪ್ರಧಾನಿ ಮೋದಿ ಅವರು ಎಂದಿಗೂ ತಮ್ಮವರ ಮೇಲೆ ದಾಳಿ ಮಾಡಿಸುವುದಿಲ್ಲ. ಸಿಎಂ ಕೆಸಿಆರ್ ಮತ್ತು ಎಐಎಂಐಎಂ ನಾಯಕರನ್ನು ತಮ್ಮವರೆಂದು ಪರಿಗಣಿಸಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ನಾವು ಕೆಸಿಆರ್ ಮತ್ತು ಅವರ ಕುಟುಂಬದ ಲಾಭಕ್ಕಾಗಿ ತೆಲಂಗಾಣಕ್ಕೆ ರಾಜ್ಯ ಸ್ಥಾನಮಾನ ನೀಡಲಿಲ್ಲ. ಮುಂದಿನ 100 ದಿನಗಳಲ್ಲಿ ಬಿಆರ್‌ಎಸ್ ಸರ್ಕಾರ ನಿರ್ಗಮಿಸಲಿದೆ. ಬಿಜೆಪಿ ಮತ್ತು ಎಐಎಂಐಎಂ ಸೇರಿದರೂ ಇದನ್ನು ತಪ್ಪಿಸಲು ಸಾಧ್ಯವಿಲ್ಲ. ರಾಜ್ಯದ ಉನ್ನತಿಗಾಗಿ ಪಕ್ಷ ಆರು ಗ್ಯಾರಂಟಿಗಳನ್ನು ಘೋಷಿಸಿದೆ ಎಂದು ಹೇಳಿದರು.